ಬಾಗಿಲು ತೆರೆಯಲಿವೆ ದೇಗುಲಗಳು

NYK TEMPALE 07
Published on

ಚಿತ್ರದುರ್ಗ: ಕರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆಗಿದ್ದ ದೇವಾಲಯ, ಮಠ, ಧಾರ್ಮಿಕ ಕೇಂದ್ರ ಹಾಗೂ ಪ್ರಾರ್ಥನಾ ಮಂದಿರಗಳು ಸೋಮವಾರ ಬಾಗಿಲು ತೆರೆಯಲಿದ್ದು, ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹೋಟೆಲ್‌ಗಳು ಗ್ರಾಹಕರಿಗೆ ಊಟೋಪಚಾರಕ್ಕೆ ಸಜ್ಜಾಗುತ್ತಿವೆ. ಉದ್ಯಾನವನ, ಆಡುಮಲ್ಲೇಶ್ವರ ಮೃಗಾಲಯ ಹಾಗೂ ಮುರುಘಾ ವನ ವೀಕ್ಷಕರಿಗೆ ಪ್ರವೇಶ ನೀಡಲು ಸಿದ್ಧತೆ ಆರಂಭಿಸಿವೆ.

ಸುದೀರ್ಘ 70 ದಿನಗಳ ಬಳಿಕ ತೆರೆಯುತ್ತಿರುವ ಹಲವು ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ಧಾರ್ಮಿಕ ಸೇವೆಗಳಿರುವುದಿಲ್ಲ. ಭಕ್ತರು ಹಣ್ಣು, ಹೂವು ತರುವಂತಿಲ್ಲ. ತೀರ್ಥ-ಪ್ರಸಾದ ವಿತರಿಸುವುದಿಲ್ಲ. ದೇವಾಲಯ ಪ್ರವೇಶಕ್ಕೆ ಮಾಸ್ಕ್, ಪರಸ್ಪರ ಅಂತರ ಇತ್ಯಾದಿ ಸರ್ಕಾರದ ಮಾರ್ಗಸೂಚಿಗಳ ಪಾಲನೆ ಕಡ್ಡಾಯ. ಸಾಮೂಹಿಕ ಭಜನೆ, ಹಾಡುಗಳಿಗೆ ಅವಕಾಶ ಇರುವುದಿಲ್ಲ.

306 ದೇವಾಲಯಗಳಿವೆ: ಜಿಲ್ಲಾದ್ಯಂತ ಮುಜರಾಯಿ ಇಲಾಖೆಯ 306 ಸೇರಿ ಇನ್ನು ಪ್ರಮುಖ ದೇವಾಲಯಗಳು ನಗರ ಮತ್ತು ಜಿಲ್ಲೆಯ ವಿವಿಧೆಡೆ ಇವೆ. ನಾಯಕನಟ್ಟಿ ತಿಪ್ಪೇಸ್ವಾಮಿ, ಹಿರಿಯೂರು ತೇರುಮಲ್ಲೇಶ್ವರ, ವದ್ದಿಕೆರೆ ಕಾಲಭೈರವೇಶ್ವರ, ಹೊಸದುರ್ಗ ಗವಿರಂಗನಾಥ ಸ್ವಾಮಿ, ಹಾಲು ರಾಮೇಶ್ವರ, ಹೊಳಲ್ಕೆರೆಯ ಚಿತ್ರಲಿಂಗೇಶ್ವರ, ಬಯಲು ಗಣಪ, ಎಚ್.ಡಿ.ಪುರ ಶ್ರೀಲಕ್ಷ್ಮೀ ನರಸಿಂಹಸ್ವಾಮಿ, ಚಳ್ಳಕೆರೆ ಗೌರಸಮುದ್ರದ ಮಾರಮ್ಮ, ಚಿತ್ರದುರ್ಗದ ನೀಲಕಂಠೇಶ್ವರ, ಬರಗೇರಮ್ಮ, ಅಯ್ಯಪ್ಪ ಸ್ವಾಮಿ, ವಾಸವಿ, ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯಗಳಲ್ಲಿ ಎಂದಿನಂತೆ ಪೂಜೆ, ದೇವರ ದರ್ಶನ ಆರಂಭವಾಗಲಿದೆ.

ಹೋಟೆಲ್‌ಗಳು ಸಜ್ಜು: ಈವರೆಗೆ ಫುಡ್ ಪಾರ್ಸೆಲ್ ಕೊಡುತ್ತಿದ್ದ ಹೋಟೆಲ್‌ಗಳಲ್ಲಿ ಇನ್ನು ಮುಂದೆ ಗ್ರಾಹಕರಿಗೆ ಸರ್ವಿಸ್ ಸಿಗಲಿದೆ. ಹೋಟೆಲ್‌ನ ಒಟ್ಟು ಸೀಟು ಕೆಪಾಸಿಟಿಯನ್ನು ಶೇ.50ಕ್ಕೆ ಕಡಿತಗೊಳಿಸಿ ಊಟೋಪಾಚಾರಕ್ಕೆ ಹೋಟೆಲ್‌ಗಳು ಸಜ್ಜಾಗುತ್ತಿವೆ. ಸ್ವಚ್ಛತೆ, ಪರಸ್ಪರ ಅಂತರಕ್ಕೆ ಆದ್ಯತೆ ನೀಡಲಾಗುವುದು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.

ವಸತಿ ಗೃಹಗಳು: ವಸತಿ ಗೃಹಗಳನ್ನು ಗ್ರಾಹಕರಿಗೆ ಕೊಡಲು ಸರ್ಕಾರದಿಂದ ಸೂಚನೆ ಬಂದಿಲ್ಲ. ಆದರೂ ಮಹಾರಾಷ್ಟ್ರದವರನ್ನು ಹೊರತುಪಡಿಸಿ ಉಳಿದವರಿಗೆ ಸ್ಕ್ರೀನಿಂಗ್ ಸೇರಿ ಇತರೆ ಷರತ್ತುಗಳನ್ವಯ ಕೊಠಡಿ ಕೊಡಲು ಸಿದ್ಧ. ಬಾರ್‌ನಲ್ಲಿ ಮದ್ಯ ಪಾರ್ಸೆಲ್ ಕೊಡುತ್ತೇವೆ. ಎಂದಿನಂತೆ ವೆಜ್ ಮತ್ತು ನಾನ್‌ವೆಜ್ ಸರ್ವಿಸ್ ಆರಂಭವಾಗಲಿದೆ ಎನ್ನುತ್ತಾರೆ ಐಶ್ವರ್ಯ ಫೋರ್ಟ್ ಮಾಲೀಕ ಅರುಣ್‌ಕುಮಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net