

ಚಿತ್ರದುರ್ಗ: ಪರಿಸರ ಸಂರಕ್ಷಣೆ ಮಹತ್ವ ಅರಿತು ಕಾಡು ಉಳಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಆಕ್ಸಿಜನ್ ಕಿಟ್ ಬಳಕೆ ಅನಿವಾರ್ಯವಾಗಲಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎಸ್.ಶಿಶುಪಾಲ್ ಎಚ್ಚರಿಸಿದರು.
ನಗರದ ತರಾಸು ರಂಗ ಮಂದಿರಲ್ಲಿ ಜಿಲ್ಲೆಯ ವಿಜ್ಞಾನ ಶಿಕ್ಷಕರಿಗೆ ಗುರುವಾರ ಏರ್ಪಡಿಸಿದ್ದ ಪುನಶ್ಚೇತನ ಕಾರ್ಯಾಗಾರದಲ್ಲಿ ಜೀವವೈವಿಧ್ಯತೆ ಕುರಿತು ಉಪನ್ಯಾಸ ನೀಡಿದರು.
ಪ್ರಕೃತಿ ನಾಶದಿಂದ ಜೀವ ಸಂಕುಲಕ್ಕೆ ಧಕ್ಕೆ ಆಗುತ್ತಿದೆ. ಅರಣ್ಯ ಬರಿದಾದರೆ ಮನುಷ್ಯರ ಬದುಕೂ ಬರಡಾಗಲಿದೆ. ಗಿಡಮರಗಳ ರಕ್ಷಣೆ ಘೋಷಣೆಗೆ ಸೀಮಿತವಾದರೆ ಮುಂದಿನ ದಿನಗಳು ಘೋರ ಆಗಲಿವೆ ಎಂದರು.
ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಾಟಚಾರಕ್ಕೆ ಪಾಠ ಮಾಡಿದರೆ ವೃತ್ತಿಗೆ ಧಕ್ಕೆ ತಂದಂತೆ. ಅಧ್ಯಯನಶೀಲರಾದರೆ ಮಾತ್ರ ಅತ್ಯುತ್ತಮ ಬೋಧನೆ ಸಾಧ್ಯ ಎಂದರು.ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶಕ್ಕೆ ಶ್ರಮಿಸುವಂತೆ ಇದೇ ವೇಳೆ ಶಿಕ್ಷಕರಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ದಪ್ಪ, ವೆಂಕಟೇಶ್, ಶಿಕ್ಷಣಾಧಿಕಾರಿಗಳಾದ ನರಸಿಂಹಪ್ಪ, ವಿಜಯ ಕುಮಾರ್, ತಿಪ್ಪೇಸ್ವಾಮಿ, ವಿಷಯ ಪರಿವೀಕ್ಷಕರಾದ ಸವಿತಾ, ಗೋವಿಂದಪ್ಪ, ಚಂದ್ರಣ್ಣ, ಶಿವಣ್ಣ ಇದ್ದರು. ಧಾತು, ಅಣು, ಪರಮಾಣು ಪುಸ್ತಕಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ವಿದ್ಯಾರ್ಥಿ, ಶಿಕ್ಷಕರಿಗೆ ಪುರಸ್ಕಾರ: ವಿಜ್ಞಾನ ವಿಷಯದಲ್ಲಿ ಶೇ.100 ಅಂಕ ಗಳಿಸಿದ ಚಳ್ಳಕೆರೆಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿ ಎನ್.ಪ್ರಜ್ವಲ್, ವೇದಾವತಿ ಪ್ರೌಢಶಾಲೆಯ ಬಿ.ಕೆ.ನೀತೇಶ್, ಹಿರಿಯೂರು ತಾಲೂಕು ಹೇಮದಳ ಸರ್ಕಾರಿ ಪ್ರೌಢಶಾಲೆಯ ಟಿ.ಯಶೋದಾ, ಹಿರಿಯೂರಿನ ಯಾಜ್ಞವಲ್ಕ್ಯ ಪ್ರೌಢಶಾಲೆಯ ಎಂ.ನಯನ ಗೌಡ, ಹೊಸದುರ್ಗದ ಎಸ್‌ಡಿಎ ಪ್ರೌಢಶಾಲೆಯ ಮಹಮದ್ ಜುನೇದ್, ನಿವೃತ್ತ ಶಿಕ್ಷಕರಾದ ಮೊಳಕಾಲ್ಮೂರಿನ ಬಸವರಾಜಪ್ಪ, ಸುರೇಶ್, ಹೊಸದುರ್ಗದ ಜಿ.ಕೆ.ತಮ್ಮಣ್ಣ, ಚಿತ್ರದುರ್ಗದ ಸಿದ್ದಪ್ಪ, ಜಾನಕಿದೇವಿ ಹಾಗೂ ಕೆ.ಟಿ.ಶಾಂತಾ ಕುಮಾರಿ ಅವರನ್ನು ಗೌರವಿಸಲಾಯಿತು.
ಶಿಕ್ಷಣ ಇಲಾಖೆ, ಜಿಲ್ಲಾ ವಿಜ್ಞಾನ ಶಿಕ್ಷಕರ ಕ್ಲಬ್ ವತಿಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.