ವಾಣಿಜ್ಯೋದ್ಯಮದ ಯುವ ಕಣ್ಮಣಿ ಜಿ.ಎಸ್. ಅನಿತ್​ಕುಮಾರ್

a2
Published on

ಭೀಮಸಮುದ್ರದ ಜಿ.ಎಸ್. ಅನಿತ್​ಕುಮಾರ್ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಯುವ ಕಣ್ಮಣಿ ಎಂದೇ ಗುರುತಿಸಿಕೊಂಡವರು. ಜಿಎಂ ಕುಟುಂಬದ ಅಡಕೆ ವ್ಯಾಪಾರದ ಜತೆಯಲ್ಲೇ ರಾಜಕಾರಣದ ಕಡೆಗೂ ತುಡಿತ ಹೊಂದಿದವರು. ದಕ್ಷಿಣ ಭಾರತದಲ್ಲೇ ಖ್ಯಾತಿ ಪಡೆದಿರುವ ‘ಜಿಎಂ ಗ್ರೂಪ್’ ಸಂಸ್ಥೆಯ 14 ಕಂಪನಿಗಳಿಗೆ ಅನಿತ್​ಕುಮಾರ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬಿಜೆಪಿ ಯುವ ಮುಖಂಡರಾಗಿಯೂ ಗಮನ ಸೆಳೆದಿದ್ದಾರೆ. ವಿಶೇಷ ದಿನಗಳು, ಪಕ್ಷದ ಚಟುವಟಿಕೆ, ಬೆಳವಣಿಗೆಗಳಿಗೆ ಪ್ರತಿಸ್ಪಂದಿಸುತ್ತಿದ್ದಾರೆ.

ದಾವಣಗೆರೆ: ‘ಜಿಎಂ ಗ್ರೂಪ್’ ಎಂಬ ಹೆಮ್ಮರದ ಕೆಳಗೆ ಹತ್ತಾರು ವಾಣಿಜ್ಯೋದ್ಯಮಗಳ ರೆಂಬೆ-ಕೊಂಬೆಗಳು ಚಾಚಿಕೊಂಡಿವೆ. 5 ಸಾವಿರ ನೌಕರ ಸಂಸಾರಗಳು ಇಲ್ಲಿ ಗೂಡು ಕಟ್ಟಿಕೊಂಡಿವೆ. ಅಜಾತಶತ್ರು ದಿ. ಜಿ.ಮಲ್ಲಿಕಾರ್ಜುನಪ್ಪ ಅವರು ಈ ಹೆಮ್ಮರದ ಗಟ್ಟಿ ಬೇರು. ಅವಿಭಕ್ತ ಜಿಎಂ ಕುಟುಂಬದ ಸದಸ್ಯರ ಪರಿಶ್ರಮ, ಆತ್ಮವಿಶ್ವಾಸವೇ ಇದರ ಅಂತಃಸತ್ವ! ಶ್ರೀ ಮಲ್ಲಿಕಾರ್ಜುನ ಜಗದ್ಗುರುಗಳಿಂದ ‘ಭೀಮಸಮುದ್ರದ ಭೀಮ’ ಎಂಬ ಬಿರುದಾಂಕಿತ ಜಿ. ಮಲ್ಲಿಕಾರ್ಜುನಪ್ಪ ಅಡಕೆ ವ್ಯಾಪಾರದ ಜತೆಯಲ್ಲೇ ರಾಜಕಾರಣದಲ್ಲೂ ಅಚ್ಚೊತ್ತಿದವರು. ವಾಟ್ಸ್ ಆಪ್, ಇನ್​ಸ್ಟಾಗ್ರಾಂ, ಟ್ವಿಟರ್​ಗಳಿಲ್ಲದ ಕಾಲದಲ್ಲಿ ಜನಸಂಪರ್ಕದೊಂದಿಗೆ ದಾವಣಗೆರೆ ಸಂಸದರಾಗಿ, ಜನಮಾನಸದಲ್ಲಿ ಉಳಿದರು.

ಸ್ವಚ್ಛ ರಾಜಕೀಯದ ಅವರ ಹಾದಿ ಅನುಕರಿಸಿದ ಪುತ್ರ ಜಿ.ಎಂ. ಸಿದ್ದೇಶ್ವರ ಅವರೂ ಸಹ ಅಭಿವೃದ್ಧಿ ರಾಜಕಾರಣದ ಮುನ್ನೆಲೆಗೆ ಬಂದರು. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ನಾಲ್ಕು ಬಾರಿ ಚುನಾಯಿತರಾಗಿ ಕ್ಷೇತ್ರದ ಪ್ರಗತಿಗೆ ಮುನ್ನುಡಿ ಬರೆದರು.

ಅಡಕೆ ಉದ್ಯಮದ ಶುರುವಾತಿನೊಂದಿಗೆ ಗುಣಮಟ್ಟದ ಸುಪಾರಿ ತಯಾರಿಕೆಯಲ್ಲಿ ನಂಬರ್ ಒನ್ ಸ್ಥಾನ ಗಳಿಸಿದ ಜಿಎಂ ಮನೆತನ, ಶಿಕ್ಷಣ, ಆರೋಗ್ಯ, ಸಹಕಾರ ಇನ್ನಿತರೆ ಕ್ಷೇತ್ರಗಳಲ್ಲೂ ಮನ್ವಂತರ ಸಾಧಿಸಿದ್ದು ಗಮನಾರ್ಹ. ಇಂತಹ ಜಿಎಂ ಮನೆತನದ ಕುಡಿ, ಜಿ.ಎಸ್. ಅನಿತ್​ಕುಮಾರ್ ಅವರು ಕೂಡ ವಾಣಿಜ್ಯೋದ್ಯಮಿಯಾಗಿ ಯಶ ಕಂಡವರು. 14ಕ್ಕೂ ಹೆಚ್ಚು ಕಂಪನಿಗಳಲ್ಲದೆ, ಶಿಕ್ಷಣ ಸಂಸ್ಥೆಗಳಲ್ಲೂ ಸಕ್ರಿಯ ಪಾತ್ರ ನಿಭಾಯಿಸುತ್ತಿದ್ದಾರೆ.

ಪಿಯುಸಿಯಲ್ಲೇ ಅಡಕೆ ವ್ಯಾಪಾರದ ಗುಟ್ಟು

46 ವಸಂತಗಳನ್ನು ಕಂಡ ಗೌಡರ ಸಿದ್ದೇಶ್ ಅನಿತ್​ಕುಮಾರ್ ಜನಿಸಿದ್ದು 1978 ರ ಸೆ. 28 ರಂದು. ತಂದೆ ಜಿ.ಎಂ. ಸಿದ್ದೇಶ್ವರ, ತಾಯಿ ಗಾಯತ್ರಮ್ಮ. ಹುಟ್ಟೂರು ಭೀಮಸಮುದ್ರವೂ ಸೇರಿ ಚಿತ್ರದುರ್ಗ, ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ, ನಂತರದ ವಿದ್ಯಾಭ್ಯಾಸ ದಾವಣಗೆರೆಯ ತರಳಬಾಳು ವಸತಿ ಶಾಲೆಯಲ್ಲಾಯಿತು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಬಿಎಂ ಪದವಿ ಮುಗಿಸಿ, ಎಂಬಿಎ ವ್ಯಾಸಂಗಕ್ಕೆ ಬೆಂಗಳೂರಿನ ಕೆನಡಿಯನ್ ವಿಶ್ವವಿದ್ಯಾಲಯ ಸೇರಿದರು. ತಂದೆ ಸಿದ್ದೇಶ್ವರ ಅವರ ಒತ್ತಾಸೆಯಿಂದಾಗಿ ಅಡಕೆ ವ್ಯಾಪಾರಕ್ಕಿಳಿದರು. ಆಗಷ್ಟೇ ಅಡಕೆ ವಹಿವಾಟು ಜೋರಿತ್ತು. ಜಿಎಂ ಮನೆತನದ ತ್ರಿಶೂಲ್ ಬ್ರ್ಯಾಂಡ್ ಕೂಡ ದೇಶದಲ್ಲೇ ನಂ.1 ಸ್ಥಾನ ಗಳಿಸಿತ್ತು. ಪಿಯುಸಿ ಓದುವಾಗಲೇ ತಾತ ಮಲ್ಲಿಕಾರ್ಜುನಪ್ಪ ಹಾಗೂ ತಂದೆ ಸಿದ್ದೇಶ್ವರ ಅವರೊಂದಿಗೆ ಅಡಕೆ ವ್ಯಾಪಾರದ ಗುಟ್ಟು ತಿಳಿದಿದ್ದ ಅನಿತ್, ಆರೆಸ್ಸೆಸ್ ಬೈಠಕ್​ಗೆ ಹೋಗುತ್ತಿದ್ದರು. ತಾತ, ಬಿಜೆಪಿಯಿಂದ ಲೋಕಸಭೆ ಅಖಾಡಕ್ಕಿಳಿದಾಗ ಪ್ರಚಾರದಲ್ಲೂ ತೊಡಗಿದ್ದರು. ಅನಿತ್ ಅವರ ಯಶಸ್ಸಿನ ಹಿಂದೆ ಪತ್ನಿ ಸವಿತಾ ಅವರ ಸಹಕಾರವಿದೆ. ತ್ರಿಷಾ, ಮಾನ್ವಿ ಹಾಗೂ ವಿರಾಜ್ ಎಂಬ ಮೂವರು ಮಕ್ಕಳಿದ್ದಾರೆ.

ಕೂಡು ಕುಟುಂಬದ್ದೇ ಠರಾವು!

ಯಾವುದೇ ಉದ್ದಿಮೆ ಆರಂಭಿಸುವುದಿರಲಿ, ಶೈಕ್ಷಣಿಕ, ವಾಣಿಜ್ಯೋದ್ಯಮ ಬೆಳವಣಿಗೆ ವಿಚಾರಗಳಿರಲಿ, ಕುಟುಂಬದ ಎಲ್ಲ ಸದಸ್ಯರು ಸೇರಿ ರ್ಚಚಿಸಿಯೇ ಅಂತಿಮ ಠರಾವು ಕೈಗೊಳ್ಳುತ್ತೇವೆ. ತಂದೆ ಸಿದ್ದೇಶ್ವರ ಹಣಕಾಸು ನಿರ್ವಹಣೆಯಲ್ಲಿ ನನಗೆ ಮಾದರಿ ಆದರೆ ಜಿ.ಎಂ. ಪ್ರಸನ್ನ ಅಂಕಲ್ ಕರಾರುವಕ್ಕಾದ ಲೆಕ್ಕದಲ್ಲಿ, ಜಿ.ಎಂ. ಲಿಂಗರಾಜು ಅಂಕಲ್ ಹೊಸ ಉದ್ದಿಮೆಗಳ ಆಲೋಚನೆಯಲ್ಲಿ ಆದರ್ಶ ಪ್ರಾಯರು. ತಾಯಿ ಗಾಯತ್ರಿ ಸಿದ್ದೇಶ್ವರ ಅವರ ಶುಭ ಹಾರೈಕೆ ನನ್ನ ಮೇಲಿದೆ ಎಂದು ಆದರ್ಶಪ್ರಾಯರೆಂದು ಸ್ಮರಿಸುತ್ತಾರೆ ಜಿ.ಎಸ್. ಅನಿತ್​ಕುಮಾರ್.

ಚಿಕ್ಕಪ್ಪಂದಿರೇ ಶಕ್ತಿ

ದಶಕದ ಹಿಂದಷ್ಟೆ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಆಪಾದನೆ ದೇಶದಲ್ಲೆಡೆ ವ್ಯಾಪಿಸಿತ್ತು. ಅಡಕೆ ಆಹಾರೋತ್ಪನ್ನಗಳ ದರದಲ್ಲೂ ವ್ಯತ್ಯಾಸವಾಗಿ ವರ್ತಕರಿಗೆ ಹೊಸ ಸವಾಲು ಸೃಷ್ಟಿಯಾಯಿತು. ಆಗ ಚಿಕ್ಕಪ್ಪಂದಿರಾದ ಜಿ.ಎಂ. ಲಿಂಗರಾಜು, ಜಿ.ಎಂ. ಪ್ರಸನ್ನಕುಮಾರ್ ಅವರ ಉತ್ತೇಜನದಿಂದ ಅಡಕೆ ಪೊಟ್ಟಣದ ಉದ್ದಿಮೆಗೆ ಜಿಎಂ ಸಂಸ್ಥೆ 2000ನೇ ಇಸವಿಯಲ್ಲಿ ಅಡಿ ಇಟ್ಟಿತು. ತಾತನ ಬೆಂಬಲದೊಂದಿಗೆ ಶುರುವಾದ ಜೆಮಿಕಾಲ್, ದಾವಣಗೆರೆ ಕೆಮಿಕಲ್ ಎಂಬ ಉದ್ಯಮ ನಿರೀಕ್ಷಿತ ಯಶ ಗಳಿಸಲಿಲ್ಲ. ಜಿ.ಎಂ. ಲಿಂಗರಾಜು ಅವರು ಪುನರ್ಪಳಿ (ಕೋಕಂ) ರಫ್ತು ಶುರು ಮಾಡಿದರು. ಆಗಷ್ಟೇ ಕಾಲಿಟ್ಟ ಆಂಥ್ರಾಕ್ಸ್ ರೋಗದಿಂದ ದರ ಕುಸಿಯಿತು. ಆಗ ಅಡಕೆ ಪೊಟ್ಟಣ ಉದ್ಯಮಕ್ಕೆ ಕಾಲಿಟ್ಟೆವು. ಆಗ ಸವಾಲುಗಳು ಕೂಡ ಹೆಚ್ಚಿದವು. ಅಡಕೆ ತಿಂದರೆ ಕ್ಯಾನ್ಸರ್ ಬರಲಿದೆ ಎಂಬ ಚರ್ಚೆ ಆಗ ನಡೆಯುತ್ತಿತ್ತು. ವಾಜಪೇಯಿ ಸರ್ಕಾರ ಅದನ್ನು ತಳ್ಳಿ ಹಾಕಿತು. 2004ರಲ್ಲಿ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅಡಕೆ ಸೇರಿ ತಂಬಾಕು ಉತ್ಪನ್ನಗಳ ಬ್ಯಾನ್​ಗೆ ಮುಂದಾಗಿತ್ತು. ಅಡಕೆ ಬೆಳೆಗಾರರು, ವರ್ತಕರ ಬದುಕು ಅನಿಶ್ಚತತೆಯಲ್ಲಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ವಿದೇಶಗಳಿಂದ ಆಮದಾಗುತ್ತಿದ್ದ ಅಕ್ರಮ ಅಡಕೆ ತಡೆಯಿತು. ಹೀಗಾಗಿ ಸ್ಥಳೀಯ ಅಡಕೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ವಿಂಟಾಲ್​ಗೆ 90,000ರೂ.ಭರ್ಜರಿ ದರ ಸಿಕ್ಕಿತು.

ವಹಿವಾಟಿನ ನಿರ್ದೇಶಕ

‘ಜಿಎಂ ಗ್ರೂಪ್’ ಸಂಸ್ಥೆ ದಕ್ಷಿಣ ಭಾರತದಲ್ಲೇ ಖ್ಯಾತಿ ಪಡೆದಿದೆ. ಇದರಡಿಯ 14 ಕಂಪನಿಗಳಿಗೆ ಗೌಡರ ಸಿದ್ದೇಶ್ ಅನಿತ್​ಕುಮಾರ್ ನಿರ್ದೇಶಕರಾಗಿ ಕಾರ್ಯ ಮುಂದುವರಿಸಿರುವುದು ಅವರ ವ್ಯವಹಾರ ಚತುರತೆಗೆ ಸಾಕ್ಷಿ. ಶ್ರೀಶೈಲ ಫಾಮ್್ಸರ್ ಪ್ರೖೆವೇಟ್ ಲಿಮಿಟೆಡ್, ಜಿಎಂ ಶುಗರ್ ಆಂಡ್ ಎನರ್ಜಿ ಲಿಮಿಟೆಡ್, ಜಿಮ್ ಲ್ಯಾಬೋರೇಟರೀಸ್ ಪ್ರೖೆವೇಟ್ ಲಿ. ಜಿಎಂ ಸೋಲಾರ್ ರಿನ್ಯೂಯೆಬಲ್ ಎನರ್ಜಿ ಪ್ರೖೆ. ಲಿ., ಜಿಎಂ ಎಸ್​ಪಿಎಲ್ ಇನ್ಪ್ರಾ ಡೆವಲವರ್ಸ್ ಪ್ರೖೆ. ಲಿ., ಭೀಮೇಶ್ವರ ಬಾಲವಿಕಾಸ ವಿದ್ಯಾಸಂಸ್ಥೆ, ಜಿಎಂ ಬ್ಯಾಂಕ್ ಇನ್ನಿತರ ಸಂಸ್ಥೆಗಳ ಹೊಣೆ ಹೊತ್ತಿರುವ ಅನಿತ್ ‘ವ್ಯವಹಾರ ಸೇತು’ವಾಗಿ ಕಾಣಸಿಗುತ್ತಾರೆ.

ಹೊಸ ಉದ್ಯಮಗಳ ರೂಪಾಂತರ

ಜಿಎಂ. ಸಂಸ್ಥೆಯ ಸೇವೆ ಬಗೆದಷ್ಟೂ ಆಳ; ಹಾವೇರಿಯ ಸಂಗೂರಿನ ಕಾರ್ಖಾನೆಯನ್ನು ಟೆಂಡರ್​ನಲ್ಲಿ ಪಡೆದ ಜಿಎಂ ಶುಗರ್ಸ್ ಸಂಸ್ಥೆ ಕಬ್ಬು ಬೆಳೆಗಾರರಿಗೆ ಆಧಾರವಾಯಿತು. ಇಂಧನ ಉತ್ಪಾದನೆಗೂ ಕೈ ಹಾಕಿತು. ಉತ್ಪಾದಿತ ಸಕ್ಕರೆ ತೊಡಗಿಸಲು ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಜೆಮ್​ಪ್ ಹೆಸರಲ್ಲಿ ಗುಣಮಟ್ಟದ ತಂಪು ಪಾನೀಯ ಉತ್ಪನ್ನದ ಕಾರ್ಖಾನೆ ತೆರೆಯಿತು. ಇದಲ್ಲದೆ ಜಿಎಂಎಸ್​ಪಿಎಲ್ ಕನ್​ಸ್ಟ್ರಕ್ಷನ್ ಕಂಪನಿ ಮೂಲಕ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದೆ. ವೈದ್ಯಕೀಯ ಪ್ರವಾಸೋದ್ಯಮ ಮಾಡುವ ಸ್ನೇಹಿತರ ಒತ್ತಾಸೆಯಿಂದಾಗಿ ಆರೋಗ್ಯ ಕ್ಷೇತ್ರದಲ್ಲೂ ಜಿಎಂ ಸಂಸ್ಥೆಯ ಕೊಡುಗೆ ದೊಡ್ಡದಿದೆ. ಬೆಂಗಳೂರಿನ ನಾಗರಬಾವಿ ಹಾಗೂ ಬಸವೇಶ್ವರ ನಗರದಲ್ಲಿ, 60 ಹಾಸಿಗೆಗಳ ಸಾಮರ್ಥ್ಯದ ಎರಡು ಆಸ್ಪತ್ರೆಗಳು 2013ರಿಂದ ಕಾರ್ಯ ನಿರ್ವಹಿಸುತ್ತಿವೆ. ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಸೌರ ವಿದ್ಯುತ್ ಕೂಡ ಉತ್ಪಾದಿಸಲಾಗುತ್ತಿದ್ದು, ಮೂರು ಪವನ ಯಂತ್ರಗಳನ್ನು ನಿರ್ವಹಿಸಲಾಗುತ್ತಿದೆ. ಜಿಎಂ ಗ್ರೂಪ್​ನಿಂದ 2002ರಲ್ಲಿ ಅದಿರು ಟ್ರೇಡಿಂಗ್ ಆರಂಭಿಸಲಾ ಯಿತು. 1986ರಲ್ಲಿ ಭೀಮಸಮುದ್ರದಲ್ಲಿ ಭೀಮೇಶ್ವರ ಬಾಲವಿಕಾಸ ವಿದ್ಯಾಸಂಸ್ಥೆ ತೆರೆದು ಮಕ್ಕಳಿಗೆ ಶಿಕ್ಷಣ ಕಲ್ಪಿಸಲಾಗುತ್ತಿದೆ. ದಾವಣಗೆರೆಯದೂ ಸೇರಿ 9 ಸಹಕಾರ ಬ್ಯಾಂಕ್​ಗಳ ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು ಸದ್ಯಕ್ಕೆ 280 ಕೋಟಿ ರೂ. ಠೇವಣಿ ಹೊಂದಿದೆ. ಜಿಎಂ ಮನೆತನ ಸಿನಿಮಾ ನಿರ್ಮಾಣ ಕ್ಷೇತ್ರದಲ್ಲೂ ಕೆಲಸ ಮಾಡಿದೆ. 1970ರಲ್ಲಿ ಬಿಡುಗಡೆ ಯಾದ ‘ಅರಿಶಿಣ-ಕುಂಕುಮ’ ಚಿತ್ರಕ್ಕೆ ದಿ.ಜಿ. ಮಲ್ಲಿಕಾರ್ಜುನಪ್ಪ ಸಹ ನಿರ್ವಪಕರಲ್ಲಿ ಒಬ್ಬರಾಗಿದ್ದರು.

ಭವಿಷ್ಯದ ನಿರೀಕ್ಷೆಗಳು

ಶಿಕ್ಷಣ ಸಂಸ್ಥೆಯ ಸಮರ್ಥ ನಿರ್ವಹಣೆ, ಅಡಕೆ ವ್ಯಾಪಾರದ ಹಿಡಿತದೊಂದಿಗೆ ಹತ್ತಾರು ಕ್ಷೇತ್ರಗಳಲ್ಲಿ ಜಿಎಂ ಕುಟುಂಬ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಜಿಎಂ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಮ್ಯಾಂಚೆಸ್ಟರ್ ನಗರ ದಾವಣಗೆರೆಯಿಂದ ಬೇರೆ ಜಿಲ್ಲೆಗಳಿಗೆ ವಿಸ್ತರಿಸುವ ಹಂಬಲವಿದೆ. ವರ್ಷದಿಂದ ವರ್ಷಕ್ಕೆ ಹೊಸ ಆಲೋಚನೆಗಳಿಗೆ ಕೈ ಹಾಕಿ ಯಶಸ್ಸಿನ ಮೆಟ್ಟಿಲೇರಿದೆ. ಇತಿಹಾಸದ ಪುಟಗಳ ಜತೆಗೆ ಭವಿಷ್ಯದ ರೆಕ್ಕೆಗಳನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ. ಹಾವೇರಿಯ ಸಂಗೂರಲ್ಲಿ ಎಥೆನಾಲ್ ಘಟಕ ಉತ್ತರೋತ್ತರವಾಗಿ ಬೆಳೆದು ನಿಂತಿದೆ. ಸಕ್ಕರೆ ಉತ್ಪಾದನೆ ಕೂಡ ದೊಡ್ಡಮಟ್ಟದಲ್ಲಿದೆ. ಜಿಎಂ ಸಹಕಾರ ಬ್ಯಾಂಕ್ ಒಟ್ಟು 9 ಶಾಖೆಗಳನ್ನು ಹೊಂದಿದ್ದು 10ನೇ ಶಾಖೆ ಇಷ್ಟರಲ್ಲೇ ಹಾವೇರಿಯಲ್ಲಿ ಶುಭಾರಂಭಗೊಳ್ಳಲಿದೆ.

ಜಿಎಂ ಸಂಸ್ಥೆಯ ಎಲ್ಲ ಉದ್ಯಮಗಳ ವಹಿವಾಟು ಆಧರಿಸಿ ಶೇರು ಮಾರ್ಕೆಟ್​ನತ್ತ ಚಿತ್ತ ಹರಿಸುವ ಸ್ಟಾಟರ್ಜಿ ನಡೆದಿದೆ. ಹರಿಹರ ತಾಲೂಕಿನಲ್ಲಿನ ಫುಡ್ ಪಾರ್ಕ್​ನಲ್ಲಿ ಪ್ಯಾಕಿಂಗ್ ಕೈಗಾರಿಕೆ ತೆರೆಯುವ ಜತೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಆಹಾರ ಪ್ರಯೋಗಾಲಯ ಆರಂಭಿಸಲು ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಎಥೆನಾಲ್ ಜೈವಿಕ ಇಂಧನ ತಯಾರಿಸುವ ಕನಸಿದೆ. ಮೂರು ತಲೆಮಾರುಗಳವರೆಗೆ ಹೊಸ ಉದ್ಯಮಗಳ ರೂಪಾಂತರಗಳನ್ನು ಕಂಡ ಜಿಎಂ ಗ್ರೂಪ್, ಸಲ್ಲಿಸಿದ ಅತ್ಯುತ್ತಮ ಸೇವೆಗೆ ಹಲವು ಪ್ರಶಸ್ತಿಗಳು ಹುಡುಕಿ ಬಂದಿವೆ. ಸಾಧನೆಯ ಹಾದಿಯನ್ನು ಮತ್ತಷ್ಟು ಹರವಿಕೊಳ್ಳುವ ತುಡಿತದಲ್ಲಿದೆ.

ಜಿಎಂಐಟಿ ದಾವಣಗೆರೆ ಐಡೆಂಟಿಟಿ

ಅಡಕೆ ಬಗೆಗಿನ ಚರ್ಚೆ ನಡೆಯುವ ಹಂತದಲ್ಲೇ ಜಿ. ಮಲ್ಲಿಕಾರ್ಜುನಪ್ಪ ಅವರು ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಚಿಂತನೆ ನಡೆಸಿದರು. ಬೆಂಗಳೂರಿಗೆ ಸಿಕ್ಕಿದ್ದ ಅನುಮೋದನೆ ದಾವಣಗೆರೆಗೆ ಸ್ಥಳಾಂತರವಾಗಿ, 54 ಎಕರೆ ಪ್ರದೇಶದಲ್ಲಿ 2000ನೇ ಇಸವಿಯಲ್ಲಿ ಜಿಎಂಐಟಿ ಕಾಲೇಜು ಆರಂಭವಾಯಿತು. ಅಲ್ಲಿಂದ ಮತ್ತೆ ಜಿಎಂ ಸಂಸ್ಥೆಯ ಹೊಸ ಪರ್ವಕಾಲ ಉದಯವಾಯಿತು. ಜಿಎಂಐಟಿ ಕಾಲೇಜು ಕ್ಯಾಂಪಸ್ 2 ವರ್ಷದಿಂದ ಜಿಎಂ ವಿಶ್ವವಿದ್ಯಾಲಯವಾಗಿ ಪರಿವರ್ತನೆಯಾಗಿದೆ. ಎಂಬಿಎ, ಬಿಸಿಎ, ಫಾರ್ಮಸಿ, ಬಿಕಾಂ, ಎಂಕಾಂ ಪದವಿ ತರಗತಿಗಳು ನಡೆಯುತ್ತಿವೆ. 10500 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಗಳಲ್ಲೂ ಜಿಎಂಐಟಿ ಕಾಲೇಜಿನ ಸೇವೆಯನ್ನು ವಿಸ್ತರಿಸುವ ಇರಾದೆ ಸಂಸ್ಥೆಗಿದೆ.

ಸಾರ್ವಜನಿಕ ಸೇವೆಯಲ್ಲೂ ಮುಂದು

ಜಿಎಂ ಸಂಸ್ಥೆ, ಉದ್ಯಮಗಳ ಜತೆ ಸಾರ್ವಜನಿಕ ಸೇವೆಯಲ್ಲೂ ಮುಂದಿದೆ. ಜಿ.ಮಲ್ಲಿಕಾರ್ಜುನಪ್ಪ ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್​ನಡಿ ಪ್ರತಿ ವರ್ಷ ಸಾಮೂಹಿಕ ವಿವಾಹ ನಡೆಯುತ್ತಿವೆ. ಕೋವಿಡ್ ವೇಳೆ ದಾವಣಗೆರೆ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ 1.80 ಕೋಟಿ ರೂ. ಮೊತ್ತದ ಆಕ್ಸಿಜನ್ ಘಟಕಗಳನ್ನು ದೇಣಿಗೆ ನೀಡಲಾಯಿತು. ಫುಡ್ ಕಿಟ್, ಮಾಸ್ಕ್ ವಿತರಿಸಲಾಯಿತು. ಶುದ್ದ ಕುಡಿವ ನೀರಿನ ಘಟಕಗಳ ಸ್ಥಾಪನೆ, ಉದ್ಯೋಗ ಮೇಳ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ನೇತ್ರ ತಪಾಸಣೆ ಶಿಬಿರ, ಬಡ ಮಕ್ಕಳಿಗೆ ಧನಸಹಾಯ, ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್, ಸಮವಸ್ತ್ರ , ನೋಟ್​ಪುಸ್ತಕ ವಿತರಣೆಯಂಥ ಸೇವಾ ಅಭಿಯಾನ ನಡೆಯುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲೂ ಸಕ್ರೀಯರಾಗಿದ್ದಾರೆ.

ತಂದೆ ಸಿದ್ದೇಶ್ವರ ಅವರು ಸಂಸದರಾಗಿ ದಾವಣಗೆರೆ ಲೋಕಸಭಾ ಕ್ಷೇತ್ರ ಸುತ್ತಿದ್ದಾರೆ. ತಾಯಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಈ ಬಾರಿ ಗೆಲುವು ಸಿಗಲಿಲ್ಲ. ನನಗೆ ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ಇದೆ. ಪಕ್ಷದ ವರಿಷ್ಠರು ಒಪ್ಪಿದರೆ ಹಾಗೂ ಜನರು ಬಯಸಿದರೆ ಜನಸೇವೆಗೆ ನಾನು ಸದಾ ಸಿದ್ಧ. | ಜಿ.ಎಸ್. ಅನಿತ್​ಕುಮಾರ್,  ವಾಣಿಜ್ಯೋದ್ಯಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net