

ಚಿತ್ರದುರ್ಗ: ಜೂ.10ರಂದು ನಡೆದಿದ್ದ ವಿಶೇಷ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕೋಟ್ಯಂತರ ರೂ. ಅನುದಾನ ಹಿಂದಕ್ಕೆ ಹೋದ ವಿಚಾರ ಸೋಮವಾರ ಮಾಸಿಕ ಕೆಡಿಪಿ ಸಭೆಯಲ್ಲೂ ಮತ್ತೆ ಸದ್ದು ಮಾಡಿತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಪಂ ಅಧಿಕಾರಿ ಶಶಿಧರ್ ಹಾಗೂ ಪಂ.ರಾಜ್ ಇಲಾಖೆ ಇಇ ಸುಭಾನ್ ಸಾಬ್ ನಡುವೆ ವಾದ, ಪ್ರತಿವಾದಕ್ಕೆ ವೇದಿಕೆ ಒದಗಿಸಿತು.
ಅನುದಾನ ಹಿಂದಕ್ಕೆ ಹೋಗಿದ್ದರಲ್ಲಿ ತಮ್ಮದೇನೂ ತಪ್ಪಿಲ್ಲವೆಂದು ಹೇಳಿದ ಸುಭಾನ್‌ಸಾಬ್ ಮಾತು, ಸಿಇಒ ಪರ ಉತ್ತರಿಸುತ್ತಿದ್ದ ಸಿಪಿಒ ಟಿ.ಶಶಿಶಧರ್ ಅವರನ್ನು ಕೆರಳಿಸಿತು.
ಸೆಪ್ಟೆಂಬರ್‌ನಲ್ಲೇ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ನೀಡಿದ ಮೇಲೆ ಪ್ರತ್ಯೇಕ ಆಡಳಿತಾತ್ಮಕ ಮಂಜೂರಾತಿ ಯಾಕೆ ಬೇಕು? ಜಿಪಂ ವತಿಯಿಂದ ತಡವಾಗಿದ್ದರೆ ದಾಖಲೆಗಳನ್ನು ಹಾಜರು ಪಡಿಸುವಂತೆ ಪಂ.ರಾಜ್ ಅಧಿಕಾರಿಗೆ ಶಶಿಧರ್ ಸೂಚಿಸಿದರು.
ಮಧ್ಯೆ ಪ್ರವೇಶಿಸಿದ ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಹಿಂದಕ್ಕೆ ಹೋಗಿರುವ ಅನುದಾನ (26.65 ಕೋಟಿ ರೂ.) ಮತ್ತೆ ಬರದೆಂದು ಸಚಿವರು ಹೇಳಿದ್ದಾರೆ. ಅದನ್ನೀಗ ಮರಳಿ ಪಡೆಯಲು ನಿಮ್ಮಿಂದ ಸಾಧ್ಯವೆ ಎಂದು ಇಂಜಿನಿಯರ್ ಅವರನ್ನು ಪ್ರಶ್ನಿಸಿದಾಗ, 20.21 ಕೋಟಿ ರೂ. ಮರಳಿ ತರಬಹುದು ಎಂದು ಸುಭಾನ್‌ಸಾಬ್ ಮಾಹಿತಿ ನೀಡಿದರು.
ಆಗ ಅಧ್ಯಕ್ಷರು ಪ್ರಸ್ತುತ ಹಣಕಾಸಿನ ವರ್ಷದಲ್ಲಿ ಯಾವುದೇ ಅನುದಾನ ಲ್ಯಾಪ್ಸ್ ಆಗಬಾರದು. ಈ ವಿಷಯದಲ್ಲಿ ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.
ಶೇಂಗಾ ಬಿತ್ತನೆ ದರ ಕಡಿತಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಹಾಗೂ ಹೆಚ್ಚುವರಿ ವಿತರಣಾ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಸದಾಶಿವ ತಿಳಿಸಿದರು.
ರೈತರಿಗೆ ತೊಂದರೆ ಆಗದಂತೆ ಬಿತ್ತನೆ ಬೀಜ ವಿತರಿಸಬೇಕು. ಯಾವೊಂದು ಇಲಾಖೆ ಅಧಿಕಾರಿಯೂ ಮೊಬೈಲ್ ಸ್ವಿಚ್ ಮಾಡಬಾರದು. ಆರ್‌ಒ ಘಟಕಗಳಲ್ಲಿ ಸ್ಮಾರ್ಟ್‌ಕಾರ್ಡ್ ಬಳಕೆ ಕಡಿಮೆ ಮಾಡಿ ಕಾಯಿನ್ ಬಳಕೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.
ಐಮಂಗಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ತಿಳಿಸಿದರು.
ಜಿಪಂ ಉಪಾಧ್ಯಕ್ಷೆ ಎನ್.ಪಿ.ಸುಶೀಲಮ್ಮ, ಸಿಇಒ ಕೆ.ಎಚ್.ಓಂಕಾರಪ್ಪ ಮತ್ತಿತರರು ಇದ್ದರು.
ಮಕ್ಕಳ ಲಸಿಕೆ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 9600 ಮಕ್ಕಳಿಗೆ ಲಸಿಕೆ ಗುರಿ ಇದ್ದು, ಇವರಲ್ಲಿ 8600 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಈಗ ಗುರುವಾರ ಮತ್ತು ಮಂಗಳವಾರ ಲಸಿಕೆ ಹಾಕಲಾಗುತ್ತಿದೆ ಎಂದು ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ತಿಳಿಸಿದರು.
ಇಒಗಳಿಗೆ ನೋಟಿಸ್: ಇಒಗಳು ಸಭೆಗೆ ಬಂದಿಲ್ಲ. ಸಿಇಒ ಟಿ.ಯೋಗೇಶ್ ಅವರು ವಿಡಿಯೋ ಕಾನ್ಫರೇನ್ಸ್ ಇದೆ ಎಂದು ಹೋದರು. ಹಾಗಾದರೆ ಸಭೆಯಲ್ಲಿ ಉತ್ತರಿಸುವರು ಯಾರೆಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದಾಗ, ಸಿಇಒ ಪರ ನಾನು ಉತ್ತರಿಸುವುದಾಗಿ ಶಶಿಧರ್ ತಿಳಿಸಿದರು. ಸಭೆಗೆ ಬಾರದ ಇಒಗಳಿಗೆ ನೋಟಿಸ್ ಜಾರಿಗೆ ಅಧ್ಯಕ್ಷರು ಸೂಚಿಸಿದರು.