

ಚಿತ್ರದುರ್ಗ: ಕರೊನಾ ಸೋಂಕು ತಡೆಗೆ ಸರ್ಕಾರದ ಜತೆ ಜನರ ಸಹಕಾರ ಬಹಳ ಅಗತ್ಯ. ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಜನತಾ ಕರ್ಪ್ಯೂ ಕರೆಗೆ ಸ್ಪಂದಿಸುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಮಾ.22ರ ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಪ್ರತಿಯೊಬ್ಬರೂ ಮನೆಯಲ್ಲೇ ಇರಬೇಕು. ಕರೊನಾ ಇದೊಂದು ಮಹಾಮಾರಿ ಎಂದು ಈಗಾಗಲೇ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಮುನ್ನ ಸೋಂಕ ಹರಡದಂತೆ ಸರ್ಕಾರದೊಂದಿಗೆ ನಾಗರಿಕರು ಕೈ ಜೋಡಿಸಬೇಕಿದೆ.
ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಹಿತ ವಿವಿಧ ಕ್ಷೇತ್ರದವರನ್ನು ಕೃತಜ್ಞತೆ ಸಲ್ಲಿಸುವ ಸಲುವಾಗಿ ಸಂಜೆ 5ಕ್ಕೆ ಮನೆಯಿಂದ ಹೊರ ಬಂದು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸೋಣ.
ನಗರ, ಜಿಲ್ಲಾದ್ಯಂತ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ಯಾರು ಅನಗತ್ಯವಾಗಿ ಪ್ರಯಾಣಕ್ಕೆ ಮುಂದಾಗ ಬಾರದು. ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನೀಡಿರುವ ಸಲಹೆ, ಸೂಚನೆಗಳನ್ನು ತಪ್ಪದೇ ಪಾಲಿಸೋಣ.
ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹತ್ತಾರು ಕ್ರಮಗಳನ್ನು ಸ್ವಾಗತಿಸಿರುವ ತಿಪ್ಪಾರೆಡ್ಡಿ, ಕರೊನಾ ವಿರುದ್ಧ ಸಮರೋಪಾದಿಯ ಹೋರಾಟ ಅನಿವಾರ್ಯ ಎಂದು ತಿಳಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ನಮ್ಮ ಮಾಲಿಕತ್ವದಲ್ಲಿರುವ ಹತ್ತಿ ಜಿನ್ನಿಂಗ್ ಫ್ಯಾಕ್ಟರಿ ಕಾರ್ಮಿಕರು ಹಾಗೂ ಕಾರು ಚಾಲಕರಿಗೆ ವೇತನ ಸಹಿತ ರಜೆ ನೀಡಲಾಗಿದೆ. ನಾನೂ ಕೂಡ ಮನೆಯಲ್ಲಿ ಇರುತ್ತೇನೆ ಎಂದು ಶಾಸಕರು ತಿಳಿಸಿದ್ದಾರೆ.