

ಚಿತ್ರದುರ್ಗ: ಕರೊನಾ ಸದ್ದಿನ ಬಳಿಕ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ, ಈ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ ಕಂಡಿತು.
ನಿತ್ಯವೂ 2000 ಹೊರ ರೋಗಿಗಳು ಹಾಗೂ ಬಹುತೇಕ ಎಲ್ಲ ವಾರ್ಡ್‌ಗಳು ಭರ್ತಿ ಇರುತ್ತಿದ್ದ ಈ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಇತ್ತು. ಮಧ್ಯಾಹ್ನ 4.30ರ ಹೊತ್ತಿಗೆ ಒಪಿಡಿ ರೋಗಿಗಳ ಸಂಖ್ಯೆ 215 ಹಾಗೂ ಒಳ ರೋಗಿಗಳ ಸಂಖ್ಯೆ 50ನ್ನು ಮೀರಿರಲಿಲ್ಲ. ಇನ್ನು ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪಿಸಿರುವ ಫ್ಲೂ ಕಾರ್ನರ್‌ನಲ್ಲಿ 10 ಮಂದಿಯ ಆರೋಗ್ಯ ತಪಾಸಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಕರೊನಾ ಹಿನ್ನೆಲೆಯಲ್ಲಿ 138ಜನರ ಮೇಲೆ ನಿಗಾ ಇರಿಸಲಾಗಿದ್ದು,ಇವರಲ್ಲಿ 49 ಜನರು 14 ದಿನಗಳ ಕ್ಯಾರಂಟೈನ್ ದಿನ ಗಳನ್ನು ಪೂರ್ಣಗೊಳಿಸಿದ್ದಾರೆ. ಈವರೆಗೆ 35 ಜನರ ಗಂಟಲು ದ್ರವ ಮತ್ತು ರಕ್ತವನ್ನು ಪರೀಕ್ಷೆಗೆ ಕಳಿಸಲಾಗಿದ್ದು, 17 ಜನರ ವರದಿ ನೆಗೆಟಿವ್ ಎಂದಿದೆ. ಆರು ಮಂದಿ ಸ್ಯಾಂಪಲ್ ಪರೀಕ್ಷೆ ಆಗಿಲ್ಲ, 12 ಮಂದಿಯ ವರದಿ ಬರಬೇಕಿದೆ ಎಂದು ಜಿಲ್ಲಾಡಳಿತದ ಆರೋಗ್ಯ ವರದಿಯಲ್ಲಿ ತಿಳಿಸಲಾಗಿದೆ.