ನರೇಗಾ ಕೆಲಸಕ್ಕೆ ಅಭಿವೃದ್ಧಿ ಸೀಮಿತ

ctd 14 narega rita
Published on

ಚಿತ್ರದುರ್ಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಡಿಸೆಂಬರ್‌ವರೆಗೆ ಇತರೆಲ್ಲ ಕಾಮಗಾರಿ ಸ್ಥಗಿತಗೊಳಿಸಿ ನರೇಗಾದಡಿ ಕೃಷಿ ಚಟುವಟಿಕೆಗಳಿಗೆ ಒತ್ತು ಕೊಡಲಾಗುತ್ತಿದೆ ಎಂದು ತಾಪಂ ಇಒ ಕೃಷ್ಣನಾಯ್ಕ ಹೇಳಿದರು.

ತಾಪಂ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ರೈತರ ಸಭೆಯಲ್ಲಿ ಮಾತನಾಡಿ, ನರೇಗಾದಡಿ ರೈತರು ಬದು ನಿರ್ಮಾಣ, ಕೃಷಿ ಹೊಂಡ, ಬಾಳೆ, ಪಪ್ಪಾಯಿ, ತೇಗ, ರೇಷ್ಮೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಕರೊನಾ ಕಾರಣಕ್ಕಾಗಿ ರಸ್ತೆ, ಚರಂಡಿ, ಸಿ.ಸಿ.ರೋಡ್, ಕಾಂಪೌಂಡ್ ಇತ್ಯಾದಿ ಕಾಮಗಾರಿಗಳನ್ನು ಇನ್ನೇಂಟು ತಿಂಗಳು ಬಂದ್ ಮಾಡಲಾಗುತ್ತಿದ್ದು, ನರೇಗಾ ಪ್ರಯೋಜನ ಪಡೆಯುವಂತೆ ರೈತರಿಗೆ ಮನವಿ ಮಾಡಿದರು.

ಜಾಬ್‌ಕಾರ್ಡ್ ಇಲ್ಲದವರಿಗೆ ಕೂಡಲೇ ಕಾರ್ಡ್ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು ಮಾತನಾಡಿ, ನರೇಗಾ ಯೋಜನೆಯಡಿ ಸಿಗುವ ಸವಲತ್ತುಗಳ ಬಗ್ಗೆ ಪ್ರಚಾರದ ಅಗತ್ಯವಿದೆ. ಸರ್ಕಾರದ ಎಷ್ಟೇ ಮಹತ್ವಾಕಾಂಕ್ಷಿ ಯೋಜನೆಗಳಿದ್ದರೂ ಬಹುತೇಕ ಇಲಾಖೆಗಳಲ್ಲಿ ರೈತರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಕೆಲವೊಮ್ಮೆ ಕಚೇರಿಗಳಿಗೆ ಅಲೆದು ಸಾಕಾಗುತ್ತದೆ ಎಂದು ಕೆಲವು ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರೈತಸಂಘದ ತಾಲೂಕಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮುಖಂಡರಾದ ಎಂ.ಬಿ.ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ರೇವಣ್ಣ, ನಾಗರಾಜ್, ಕಾಂತರಾಜ್, ನಿಂಗಪ್ಪ, ರವಿಕುಮಾರ್, ರವಿ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net