

ಚಿತ್ರದುರ್ಗ: ನಗರದ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರೀ ರಾಮೋತ್ಸವದ ಅಂಗವಾಗಿ ಶುಕ್ರವಾರ ರಾಮ ಪರಿವಾರ ಪ್ರಾಕಾರೋತ್ಸವ ಜರುಗಿತು. ಲಾಕ್‌ಡೌನ್ ಕಾರಣದಿಂದ ಅದ್ಧೂರಿ, ಸಡಗರ ಸಂಭ್ರಮಕ್ಕೆ ಬ್ರೇಕ್ ಬಿದ್ದಿತ್ತು.
ದೇವಾಲಯ ಸಮಿತಿ ನಾಲ್ವರು ಪ್ರಮುಖರ ಉಪಸ್ಥಿತಿಯಲ್ಲಿ, ಅರ್ಚಕರು ಬೆಳಗ್ಗೆ 6 ರಿಂದ 10 ವರೆಗೆ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಪ್ರತಿ ವರ್ಷ ಪ್ರಾಕಾರೋತ್ಸವದ ಅಂಗವಾಗಿ ನಗರದಲ್ಲಿ ಶ್ರೀ ರಾಮದೇವರ ಅದ್ಧೂರಿ ಮೆರವಣಿಗೆ, ಅನ್ನಸಂತರ್ಪಣೆ, ದೇವಾಲಯ ಹಾಗೂ ದೇವರಿಗೆ ವಿಶೇಷ ಅಲಂಕಾರ, ದರ್ಶನ ನೆರವೇರುತ್ತಿದ್ದವು.
ಶ್ರೀ ಕನ್ಯಕಾ ದೇವಿ ಪ್ರಾಕಾರೋತ್ಸವ: ಪ್ರತಿ ಶುಕ್ರವಾರದ ಶ್ರೀ ಕನ್ಯಕಾ ಪರಮೇಶ್ವರಿ ದೇವಿ ಪ್ರಾಕಾರೋತ್ಸವ ಬೆಳಗ್ಗೆ ಅತ್ಯಂತ ಸರಳವಾಗಿ ನೆರವೇರಿತು. ಅಮ್ಮನವರ ಪ್ರಾಕಾರೋತ್ಸವದ ಅಂಗವಾಗಿ ದೇವಾಲಯದಲ್ಲಿ ಸಂಜೆ ಪೂಜೆ, ಮಹಾಮಂಗಳಾರತಿ ಬಳಿಕ ನೂರಾರು ಜನರಿಗೆ ಅನ್ನಸಂತರ್ಪಣೆ ವಾಡಿಕೆ ಇದೆ. ಆದರೆ ಇದೆಲ್ಲಕ್ಕೂ ಕರೊನಾ ಅಡ್ಡಿ ಆಯಿತು.
ಕಳೆದ 25 ವರ್ಷಗಳ ಅವಧಿಯಲ್ಲಿ ಶ್ರೀ ರಾಮ ಪರಿವಾರದ ಪ್ರಾಕಾರೋತ್ಸವ ಇಷ್ಟೊಂದು ಸರಳವಾಗಿ ಆಚರಿಸಿರಲಿಲ್ಲ. ಭಕ್ತ ಜಂಗುಳಿಗೆ ಅವಕಾಶವಿಲ್ಲದಂತೆ, ಶಾಸ್ತ್ರ, ಸಂಪ್ರದಾಯವನ್ನಾಧರಿಸಿ ಪೂಜಾದಿ ಕಾರ‌್ಯಕ್ರಮ ನೆರವೇರಿಸಲಾಗಿದೆ ಎಂದು ಆರ‌್ಯವೈಶ್ಯ ಸಮಾಜದ ಅಧ್ಯಕ್ಷ ಕಾಶಿ ವಿಶ್ವನಾಥ ಶೆಟ್ಟಿ ತಿಳಿಸಿದರು.
ಈ ವೇಳೆ ದೇವಾಲಯ ಸಮಿತಿ ಪ್ರಮುಖರಾದ ವೆಂಕಟೇಶ್‌ಕುಮಾರ್, ಓ. ಆನಂದ್, ಎ.ಜಿ.ಸುರೇಶ್ ಹಾಗೂ ಶ್ರೀಧರ್ ಇದ್ದರು.
ಸಪ್ತಶತಿ ಪಾರಾಯಣ: ರಾಮೋತ್ಸವ ಸಂದರ್ಭದಲ್ಲಿ ನಿರಂತರವಾಗಿ ದೇವರಿಗೆ ಅಭಿಷೇಕ, ಅಲಂಕಾರ, ಅಷ್ಟಾವಧಾನ ಸೇವೆ ನಡೆದಿದೆ. ಲೋಕ ಕಲ್ಯಾಣಾರ್ಥ ಹಾಗೂ ಕರೊನಾ ವೈರಸ್ ನಾಶಕ್ಕೆ ಪ್ರಾರ್ಥಿಸಿ ಅರ್ಚಕ ರಾಘವೇಂದ್ರ ಶರ್ಮ ಏ.2 ರಿಂದ 10 ರವರೆಗೆ ನಿತ್ಯ ಬೆಳಗ್ಗೆ ಸಪ್ತಶತಿ ಪಾರಾಯಣ ಮಾಡಿದ್ದಾರೆ.