

ಚಿತ್ರದುರ್ಗ: ಕರೊನಾ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಯಾರು ಎಷ್ಟು ಹೇಳಿದರೂ ಜನರು ಮಾತ್ರ ತಲೆ ಕೆಡಿಸಿಕೊಳ್ಳದಿರುವುದು ಅಧಿಕಾರಿಗಳನ್ನು ಚಿಂತೆಗೆ ದೂಡಿದೆ.
ವಿವಿಧ ಬ್ಯಾಂಕ್‌ಗಳ ಮುಂದೆ ಕಳೆದ ಒಂದು ವಾರದಿಂದ ಹೆಚ್ಚು ಜನ ಸೇರುತ್ತಿರುವುದು ಬ್ಯಾಂಕ್ ಅಧಿಕಾರಿಗಳನ್ನು ಕಂಗೆಡಿಸಿದೆ. ಸೋಮವಾರವೂ ನಗರದ ಬಿಡಿ ರಸ್ತೆಯ ಎಸ್‌ಬಿಐ, ಕೆನರಾ ಬ್ಯಾಂಕ್, ತುರುವನೂರು ರಸ್ತೆ ಖಾಸಗಿ ಬ್ಯಾಂಕ್ ಸಹಿತ ನಾನಾ ಬ್ಯಾಂಕ್‌ಗಳೆದುರು ಗ್ರಾಹಕರ ದಟ್ಟಣೆ ಅಧಿಕವಾಗಿತ್ತು.
ಜಿಲ್ಲಾಸ್ಪತ್ರೆ ಆವರಣದಲ್ಲೂ ರೋಗಿಗಳು ಹಾಗೂ ಅವರ ಸಂಬಂಧಿಕರ ದಟ್ಟಣೆ ಅಧಿಕವಿತ್ತು. ತಾಯಿ-ಮಗು ವಿಭಾಗವೂ ಇದಕ್ಕೆ ಹೊರತಾಗಿರಲಿಲ್ಲ. ಜನರೊಂದಿಗೆ ವಾಹನಗಳನ್ನು ಆಸ್ಪತ್ರೆ ಆವರಣದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾರ್ಕಿಂಗ್ ಮಾಡಲಾಗಿತ್ತು. ತಾಯಿ ಮಗು ಆಸ್ಪತ್ರೆ ಎದುರೇ ಐಸಿಯು ಇದೆ. ಆದರೆ, ದ್ವಿಚಕ್ರ ಮತ್ತಿತರ ವಾಹನಗಳ ನಿಲುಗಡೆಯಿಂದಾಗಿ ಅಲ್ಲಿವರೆಗೆ ತೆರಳಲು ಅಂಬ್ಯುಲೆನ್ಸ್ ಚಾಲಕರು ಪರದಾಡಬೇಕಿದೆ.