

ಚಿತ್ರದುರ್ಗ: ಕರೊನಾ ಸೋಂಕು ತಗುಲಿರುವ ಕಾನ್‌ಸ್ಟೇಬಲ್ ಮೇ 7ರಿಂದ 10 ದಿನ ಬೆಂಗಳೂರಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿ ಇವರೊಂದಿಗೆ ಇದ್ದ ಸಹೋದ್ಯೋಗಿಯೊಬ್ಬರಲ್ಲಿ ಪಾಸಿಟಿವ್ ಕಾಣಿಸಿದ್ದು, ಒಂದೇ ವ್ಯಾನ್‌ನಲ್ಲಿ ಇವೆರಲ್ಲರೂ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದರು ಎಂದು ಎಸ್ಪಿ ಜಿ.ರಾಧಿಕಾ ಹೇಳಿದ್ದಾರೆ.
ಇವರೊಂದಿಗೆ ಕೆಲಸ ಮಾಡಿದ್ದ ಮತ್ತೊಬ್ಬ ಕಾನ್‌ಸ್ಟೇಬಲ್(27 ವರ್ಷ) ಅವರಲ್ಲಿ ಪಾಸಿಟಿವ್ ಇರುವುದಾಗಿ ಮೇ 22ರಂದು ಮಾಹಿತಿ ಇತ್ತು. ಮರುದಿನವೇ ದಾವಣಗೆರೆ ಜಿಲ್ಲೆಯ ಗ್ರಾಮವೊಂದಕ್ಕೆ ತಮ್ಮ ಸಂಬಂಧಿ ಮದುವೆಗೆ ತೆರಳಿದ್ದ ಕಾನ್‌ಸ್ಟೇಬಲ್ ಮೇ.24ರಂದು ತಮ್ಮ ಗ್ರಾಮಕ್ಕೆ ವಾಪಸಾಗುತ್ತಿದ್ದಂತೆ ಸೊಂಡೇಕೊಳದಲ್ಲೇ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು.
ಇವರನ್ನು ಮದುವೆಗೆ ಕರೆದೊಯ್ದಿದ್ದ ಟಿಟಿ ವಾಹನ ಚಾಲಕ ಹಾಗೂ ಮದುವೆಯಲ್ಲಿ ಭಾಗವಹಿಸಿದ್ದ 20-30 ಜನರನ್ನೂ ಪ್ರಾಥಮಿಕ ಸಂಪರ್ಕಿತರೆಂದು ಪರಿಗಣಿಸಿ, ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಬೇಕಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.