ಜಿಲ್ಲೆ ಶಾಸಕರೊಂದಿಗೆ ಚರ್ಚಿಸಿ

CTD 29 MLA
Published on

ಚಿತ್ರದುರ್ಗ: ಕರೊನಾ ವಿರುದ್ಧ ಹೋರಾಟದಲ್ಲಿ ಜಿಲ್ಲೆಯ ಶಾಸಕರೊಂದಿಗೂ ಸಮಾಲೋಚಿಸುವಂತೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿರುವುದಾಗಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಕಮ್ಮಾರೆಡ್ಡಿ ಜನಸಂಘದಿಂದ ಮುಖ್ಯಮಂತ್ರಿ ನಿಧಿಗೆ ಕೊಟ್ಟಿರುವ 5 ಲಕ್ಷ ರೂ. ದೇಣಿಗೆ ಚೆಕ್ ಅನ್ನು ಸಂಘದ ಅಧ್ಯಕ್ಷರೂ ಆದ ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾರಿಗೆ ಭಾನುವಾರ ಹಸ್ತಾಂತರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಗಳನ್ನು ಮುಖ್ಯಮಂತ್ರಿ ನಿಧಿಗೆ ಕೊಡುವಂತೆ ಜಿಲ್ಲಾಧಿಕಾರಿಗೆ ಕೋರಿದ್ದೇನೆ. ಕರೊನಾ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಚರ್ಚಿಸಲು ಕನಿಷ್ಠ ಎರಡು ದಿನಗಳಿಗೆ ಒಮ್ಮೆಯಾದರೂ ಜಿಲ್ಲೆ ಶಾಸಕರೊಂದಿಗೆ ಸಮಾಲೋಚಿಸುವಂತೆ ಡಿಸಿಗೆ ಮನವಿ ಮಾಡಿದ್ದೇನೆ ಎಂದರು.

ಭೀಮಸಮುದ್ರದ ಮೂವರು ಉದ್ಯಮಿಗಳು ಸೋಮವಾರ ಮುಖ್ಯಮಂತ್ರಿ ನಿಧಿಗೆ 5 ಲಕ್ಷ ರೂ. ದೇಣಿಗೆ ಕೊಡಲಿದ್ದು, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ನಿಧಿಗೆ ಉಳ್ಳವರು ಹೇರಳವಾಗಿ ದೇಣಿಗೆ ಕೊಡಬೇಕೆಂದು ಮನವಿ ಮಾಡಿದರು.

ಸೋಂಕು ದೇಶದಲ್ಲಿ 3ನೇ ಹಂತ ತಲುಪಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಜನರು ಮನೆಯಲ್ಲೇ ಇರುವ ಮೂಲಕ ಮಹಾಮಾರಿಯನ್ನು ಓಡಿಸಲು ಸಹಕರಿಸಬೇಕು.

ವೈದ್ಯರು ಮತ್ತವರ ಸಿಬ್ಬಂದಿ ಸೋಂಕಿನ ವಿರುದ್ಧ ಜೀವ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಇದರ ದುಷ್ಪರಿಣಾಮ ಕುರಿತು ಮಾಧ್ಯಮಗಳು ಜಾಗೃತಿ ಮೂಡಿಸುತ್ತಿದ್ದರೂ, ಅನಗತ್ಯವಾಗಿ ಬೀದಿಗಿಳಿಯುವವರ ವಿರುದ್ಧ ಪೊಲೀಸರು ಬಿಗಿ ಕ್ರಮ ತೆಗೆದುಕೊಳ್ಳಬೇಕು. ಸಂಕಷ್ಟ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಸುವ ಪಟ್ಟಭದ್ರ ಹಿತಾಸಕ್ತಿಗಳು ದೇಶ ದ್ರೋಹದ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘ ಪರಿವಾರ ಪ್ರಮುಖರಾದ ಟಿ.ಬದ್ರಿನಾಥ್, ಪ್ರಭಂಜನ್, ಶ್ರೀನಿವಾಸ್ ಇದ್ದರು.

ಡಯಾಲಿಸಿಸ್‌ಗೆ ತೊಂದರೆ ಆಗಬಾರದು: ರಾಜ್ಯದ ಹಲವೆಡೆ ಡಯಾಲಿಸಿಸ್ ಕೇಂದ್ರಗಳಲ್ಲಿ ರೋಗಿಗಳಿಗೆ ತೊಂದರೆ ಆಗಿದೆ. ಪೂರಕ ಔಷಧಗಳ ಕೊರತೆ ನೆಪದಲ್ಲಿ ಕೇಂದ್ರಗಳನ್ನು ಮುಚ್ಚುವ ಹುನ್ನಾರು ನಡೆದಿದ್ದು, ಯಾವೊಂದು ಕೇಂದ್ರವನ್ನೂ ಮುಚ್ಚದಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಈ ವಿಷಯವನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್.ರವಿಕುಮಾರ್ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಗಮನಕ್ಕೆ ತರಲಾಗಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು. ಲಾಕ್‌ಡೌನ್‌ನಿಂದಾಗಿ ಡಯಾಲಿಸಿಸ್ ಕೇಂದ್ರಗಳಲ್ಲಿ ರೋಗಿಗಳಿಗೆ ತೊಂದರೆ ಆಗಿದೆ ಎಂದು ವಿಜಯವಾಣಿ ಮಾ.29ರಂದು ವರದಿ ಪ್ರಕಟಿಸಿತ್ತು.

ವಾರ್ ರೂಂ. ಸ್ಥಾಪನೆ: ಹೋಂ ಕ್ವಾರಂಟೈನ್ ಹಾಗೂ ಮನೆಯಲ್ಲಿರುವ ಅಸಹಾಯಕರ ನೆರವಿಗಾಗಿ ಬಜರಂಗಳ, ವಿಎಚ್‌ಪಿ ಕಾರ್ಯಕರ್ತರು ನಗರದಲ್ಲಿ ಸ್ಥಾಪಿಸಿರುವ ವಾರ್ ರೂಂ. ಇನ್ನೇರೆಡು ದಿನದಲ್ಲಿ ಕಾರ್ಯಾರಂಭ ಮಾಡಲಿದೆ. ಈ ವಾರ್ ರೂಂ.ಗೆ ಸಂಘದಿಂದ 3 ಲಕ್ಷ ರೂ. ಹಾಗೂ ಅಂದಾಜು 4 ಲಕ್ಷ ರೂ. ಮೊತ್ತದಲ್ಲಿ ಮಾಸ್ಕ್, ಸ್ಯಾನಿಟೈಸರ್‌ನ್ನು ಖರೀದಿಸಲಾಗುವುದು. ಇವುಗಳನ್ನು ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪತ್ರಿಕೆ ಹಂಚುವವರು, ನಗರಸಭೆ ಸಿಬ್ಬಂದಿ ಹಾಗೂ ಅಗತ್ಯ ಸೇವೆ ಸಲ್ಲಿಸುತ್ತಿರುವ ಇತರ ಸಿಬ್ಬಂದಿಗೆ ವಿತರಿಸಲಾಗುವುದು. ಅಗತ್ಯವಿರುವಂಥವರು ಪ್ರಭಂಜನ್ (98449041317) ಶ್ರೀನಿವಾಸ್ (9008476229) ಸಂಪರ್ಕಿಸಬಹುದಾಗಿದೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net