ಆರೋಗ್ಯ ಇಲಾಖೆಗೆ ಖಾಕಿ ಪಡೆ ಸಾಥ್

CTD 19 POLICE (2)
Published on

ಚಿತ್ರದುರ್ಗ: ಕರೊನಾ ಸೋಂಕಿನ ಕುರಿತಂತೆ ಪೊಲೀಸರಲ್ಲಿ ಯಾವುದೇ ಗೊಂದಲ ಇರಬಾರದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂದೇಶಗಳನ್ನು ಪೊಲೀಸರು ಸೇರಿ ನಾಗರಿಕರು ನಂಬಬಾರದು ಎಂದು ಎಸ್‌ಪಿ ಜಿ.ರಾಧಿಕಾ ಹೇಳಿದರು.

ನಗರದ ಕವಾಯಿತು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮಾಸ್ಕ್, ಸ್ಯಾನಟೈಸರ್ ವಿತರಿಸಿ ಮಾತನಾಡಿದರು.

ಸೋಂಕಿನ ಅಪಾಯದ ಬಗ್ಗೆ ಮೊದಲು ಪೊಲೀಸರು ತಿಳಿಯಬೇಕು. ನಿರ್ಬಂಧಿತ ಸೋಂಕಿತರು, ವಿದೇಶದಿಂದ ಬಂದವರ ಹೆಸರು ಬಹಿರಂಗ ಪಡಿಸಬಾರದು. ಆದರೆ, ಅವರ ಮೇಲೆ ಸ್ಪಷ್ಟ ನಿಗಾ ಇರಬೇಕು. ಆ ಮೂಲಕ ಈ ಮಹಾಮಾರಿಯ ವಿರುದ್ಧದ ಹೋರಾಟಕ್ಕೆ ಆರೋಗ್ಯ ಇಲಾಖೆಯೊಂದಿಗೆ ನಾವೂ ಕೈ ಜೋಡಿಸೋಣ ಎಂದು ಪೊಲೀಸರಿಗೆ ಸೂಚಿಸಿದರು.

ಆಕಸ್ಮಿಕವಾಗಿ ಸೋಂಕು ಲಕ್ಷಣವಿರುವಂಥವರು ಕಂಡು ಬಂದಲ್ಲಿ ಅವರನ್ನು ಬಸ್‌ಗಳಲ್ಲಿ ಕಳುಹಿಸದೇ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಬೇಕು. ಕಾಯಿಲೆ ಬಗ್ಗೆ ಹೆದರಿಕೆ ಬೇಡ, ಹಾಗಾಂಥ ಮೊಂಡು ಧೈರ್ಯ ತೋರಿಸುವುದು ಬೇಡ ಎಂದರು.

ನಿಷೇಧಾಜ್ಞೆ ಇರುವುದರಿಂದಾಗಿ ದಟ್ಟಣೆ ಸೇರದಂತೆ ಪರಿಸ್ಥಿತಿ ನಿಬಾಯಿಸುವಂತೆ ಪೊಲೀಸರಿಗೆ ಸೂಚಿಸಿದ ಅವರು, ತುರ್ತು ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಹಾಯವಾಣಿ ಹಾಗೂ ಪೊಲೀಸ್ ನಿಯಂತ್ರಣ ಕೊಠಡಿ ಸಂಪರ್ಕಿಸುವಂತೆ ನಾಗರಿಕರಿಗೆ ಮನವಿ ಮಾಡಿದರು.

ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಮಾತನಾಡಿ, ಆರೋಗ್ಯಾಧಿಕಾರಿಗಳಿಗೆ ಸುರಕ್ಷಾ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಪ್ರತಿ ತಾಲೂಕಿಗೂ ಒಂದೊಂದು ಅಂಬ್ಯುಲೆನ್ಸ್‌ನ್ನು ಕಾಯ್ದಿರಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಟಾಸ್ಕ್‌ಪೋರ್ಸ್ ಕಮಿಟಿ ನಿತ್ಯ ಪರಿಸ್ಥಿತಿ ಪರಿಶೀಲಿಸುತ್ತಿದೆ. ಜಿಲ್ಲೆಯಲ್ಲಿ ಈವರೆಗೂ ಸೋಂಕು ಶಂಕಿತರು ಕಂಡು ಬಂದಿಲ್ಲ.

ಬಸವೇಶ್ವರ ಆಸ್ಪತ್ರೆ ಮತ್ತೊಬ್ಬ ವೈದ್ಯ ಡಾ.ರುದ್ರೇಶ್ ಮಾತನಾಡಿದರು. ಎಎಸ್‌ಪಿ ಮಹಾಲಿಂಗ ಬಿ.ನಂದಗಾಂವಿ,ಡಿವೈಎಸ್ಪಿಗಳಾದ ಪಾಂಡುರಂಗಪ್ಪ,ತಿಪ್ಪೇಸ್ವಾಮಿ,ಇನ್ಸ್‌ಪೆಕ್ಟರ್‌ಗಳಾದ ನಯೀಂ ಅಹಮದ್,ಸೋಮಶೇಖರ್,ಆರೋಗ್ಯ ಇಲಾಖೆಯ ಮಂಜುನಾಥ್, ಎಸ್ಪಿ ಕಚೇರಿಯ ಜಿಎಚ್‌ಎ ಮಹಾಂತೇಶ್‌ರೆಡ್ಡಿ ಮತ್ತಿತರರು ಇದ್ದರು.

ಟಿಬಿಗಿಂತ ಕರೊನಾ ಭೀಕರ ಅಲ್ಲ: ಸ್ಯಾನಿಟೈಸರ್ ಇಲ್ಲವೆಂಬ ಆತಂಕ ಬೇಡ, ಸ್ವಚ್ಛತೆಗೆ ಸಾಮಾನ್ಯ ಸೋಪು ಸಾಕು. ಕರೊನಾಕ್ಕೆ ನಿಗದಿತ ಚಿಕಿತ್ಸೆ ಇಲ್ಲ, ವ್ಯಾಕ್ಸಿನ್ ಇಲ್ಲ, ವದಂತಿಗಳನ್ನು ನಂಬಬಾರದು. ಟಿಬಿಯಿಂದ ಪ್ರತಿ ನಿಮಿಷಕ್ಕೆ ಇಬ್ಬರು ಸಾಯುತ್ತಿದ್ದಾರೆ. ಕರೊನಾ ಟಿಬಿಗಿಂತ ಭೀಕರ ಅಲ್ಲ. ಆದರೆ, ಇದು ಕೂಡ ಸಾಂಕ್ರಾಮಿಕ ಎಂಬುದನ್ನು ಮರೆಯುವಂತಿಲ್ಲ ಎಂದು ಬಸವೇಶ್ವರ ಆಸ್ಪತ್ರೆಯ ವೈದ್ಯೆ ಡಾ.ಸುಧಾರಾಣಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net