

ಚಿತ್ರದುರ್ಗ: ಪ್ರಯಾಣಕ್ಕೆ ಅವಕಾಶ ದೊರೆತ 2ನೇ ದಿನ ಕೆಎಸ್‌ಆರ್‌ಟಿಸಿ ಬಸ್ ಏರುವ ಅವಸರದಲ್ಲಿ ಕರೊನಾ ಭೀತಿ, ದೈಹಿಕ ಅಂತರ ಇತ್ಯಾದಿ ಶಿಸ್ತುನ್ನು ಪ್ರಯಾಣಿಕರು ಮರೆತಂತೆ ವರ್ತಿಸುವುದು ಸಾಮಾನ್ಯವಾಗಿತ್ತು.
ಬೆಳಗ್ಗೆಯಿಂದಲೇ ನಿಲ್ದಾಣದೆದುರು ಪ್ರಯಾಣಿಕರ ಉದ್ದನೆ ಸಾಲಿತ್ತು. ಕೆಲ ಕಾಲ ಹೊತ್ತು ಶಿಸ್ತಿನಿಂದ ಇದ್ದರೂ ಒಮ್ಮೊಮ್ಮೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳಲು ಪ್ರಯಾಣಿಕರು ವಿಫಲರಾಗುತ್ತಿದ್ದರು.
ಆರೋಗ್ಯ ಸಿಬ್ಬಂದಿ ಪ್ರತಿ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡುತ್ತಿದ್ದರು. ಆರು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪರಸ್ಥಳಗಳಿಗೆ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ತೆರಳಿದರು.
ಮಕ್ಕಳು, ಲಗೇಜುಗಳೊಂದಿಗೆ ಕ್ಯೂನಲ್ಲಿ ನಿಂತು ಬಸ್ ಹತ್ತುತ್ತಿದ್ದ ಪ್ರಯಾಣಿಕರಿಗೆ, ಸಾಕಾಪ್ಪ ಈ ಸಂಕಟವೆಂದು ಕರೊನಕ್ಕೆ ಶಾಪ ಹಾಕುತ್ತಿದ್ದರು. ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗೀಯ ಕಚೇರಿಯ ಎಲ್ಲ ಡಿಪೋಗಳಿಂದ ಹೊರಟ ವಾಹನಗಳ ಸಂಖ್ಯೆ ಬುಧವಾರ ದುಪ್ಪಟ್ಟನ್ನು ಮೀರಿತ್ತು.
ವಾಹನಗಳ ಸಂಖ್ಯೆ 60ರಿಂದ 123ಕ್ಕೆ ಏರಿದ್ದು, ಬುಧವಾರವೂ ಶೇ.90 ವಾಹನಗಳು ಬೆಂಗಳೂರಿಗೆ ತೆರಳಿದವು. ಶಿವಮೊಗ್ಗ, ಹೊಸಪೇಟೆ, ದಾವಣಗೆರೆ ಹಾಗೂ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳತ್ತ ಮುಖ ಮಾಡಿದ್ದವು.
ಮೊದಲ ದಿನ ಟಿಕೆಟ್ ಮೊತ್ತ ಅಂದಾಜು 3.50 ಲಕ್ಷ ರೂ. ಸಂಗ್ರಹವಾಗಿದ್ದರೆ, 2ನೇ ದಿನದ ಸಂಗ್ರಹದ ಮೊತ್ತ 6.67ಲಕ್ಷ ರೂ. ಗಳಿಗೆ ಏರಿತ್ತು. ಬಸ್ ನಿಲ್ದಾಣದಲ್ಲಿ ಇನ್ನು ಯಾವುದೇ ಅಂಗಡಿ ಮುಂಗಟ್ಟು ತೆರದಿರಲಿಲ್ಲ. ಒಂದೆಡೆ ಹೋಟೆಲ್‌ಗಳ ಸೌಕರ್ಯವೂ ಸರಿಯಾಗಿಲ್ಲದೆ ಪ್ರಯಾಣಿಕರೊಂದಿಗೆ ಬಸ್ ಸಿಬ್ಬಂದಿ ಊಟಕ್ಕೆ, ತಿಂಡಿಗೂ ಪರದಾಟವಾಗುತ್ತಿತ್ತು.