

ಚಿತ್ರದುರ್ಗ: ಇಡೀ ಜಗತ್ತೇ ಮೆಚ್ಚುವಂತಹ ಸರ್ವಶ್ರೇಷ್ಠ ಸಂವಿಧಾನ ನೀಡಿದ ಸಂವಿಧಾನ ಶಿಲ್ಪಿ ಸರ್ವರ ಆಸ್ತಿ. ಇಂದಿನ ಯುವಕರು ಅಂಬೇಡ್ಕರ್ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಗುರುವಾರ ಆಯೋಜಿಸಿದ್ದ ‘ಸರ್ವರಿಗೂ ಸಂವಿಧಾನ ಆಶಯದೊಂದಿಗೆ ಭಾರತ ಸಂವಿಧಾನ’ ಕುರಿತ ಸೂತ್ರಧಾರ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ವರಿಗೂ ಸಮಬಾಳು-ಸಮಪಾಲು ಎಂಬ ಸಂವಿಧಾನದ ಆಶಯ ಹಾಗೂ ಅಂಬೇಡ್ಕರ್ ಸಿದ್ಧಾಂತ ಮತ್ತು ಹೋರಾಟ ಬಗ್ಗೆ ಮನವರಿಕೆ ಮಾಡಿಕೊಡುವ ಉದ್ದೇಶ ಹೊಂದಿರುವ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನಾಟಕೋತ್ಸವ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಾನ್ ನಾಯಕರ ಜಯಂತಿಗೆ ರಜೆ ಘೋಷಣೆ ಮಾಡುತ್ತವೆ. ಇದರಿಂದ ಅವರಿಗೆ ಆ ವ್ಯಕ್ತಿಗಳ ಮಹತ್ವ ತಿಳಿಯಲು ಸಾಧ್ಯವಾಗುವುದಿಲ್ಲ. ಆದರೆ ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಯುವಕರಿಗೆ ಅರ್ಥೈಸುವ ಅನಿವಾರ್ಯತೆ ಇದೆ. ಅಂಬೇಡ್ಕರ್ ಒಂದು ಜಾತಿ, ವರ್ಗ, ಧರ್ಮಕ್ಕೆ ಸೀಮಿತರಾದವರಲ್ಲ ಎಂದು ಹೇಳಿದರು.
ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು ಮಾತನಾಡಿ, ಸಂವಿಧಾನದ ಧ್ಯೇಯಗಳಾದ ಶಿಕ್ಷಣ, ಸಂಘಟನೆ, ಹೋರಾಟದ ಗುಣವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ, ಹಿರಿಯ ಸಾಹಿತಿ ಪ್ರೊ.ಎಚ್.ಲಿಂಗಪ್ಪ, ಆರ್ಥಿಕ ವಿಶ್ಲೇಷಕ ಜಿ.ಎನ್.ಮಲ್ಲಿಕಾರ್ಜುನ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಪಿ.ಪ್ರೇಮನಾಥ್, ಸ್ಲಂ ಜನಾಂದೋಲನ ಅಧ್ಯಕ್ಷ ಕೆ.ರಾಜಣ್ಣ, ಚಳ್ಳಕೆರೆ ನಗರಸಭೆ ಸದಸ್ಯ ಕೆ.ವೀರಭದ್ರಪ್ಪ, ಪ್ರಾಚಾರ್ಯರಾದ ಚಿಕ್ಕಗೊಂಡನಹಳ್ಳಿ ಗುರುಮೂರ್ತಿ, ಜಂಪನಹಟ್ಟಿ ದೇವೇಂದ್ರಪ್ಪ, ಬಾಲೇನಹಳ್ಳಿ ರಾಮಣ್ಣ, ಮೈಸೂರು ರಂಗಕರ್ಮಿ ಶಿವಲಿಂಗಯ್ಯ, ಮುಖಂಡರಾದ ಕೃಷ್ಣಮೂರ್ತಿ, ಬುದ್ಧನಗರ ಯಲ್ಲಪ್ಪ, ರಾಮಚಂದ್ರಪ್ಪ, ಕೃಷ್ಣಪ್ಪ, ಹುಚ್ಚವ್ವನಹಳ್ಳಿ ವೆಂಕಟೇಶ್, ತುರುವನೂರು ಜಗನ್ನಾಥ್, ನ್ಯಾಯವಾದಿ ಚಂದ್ರಪ್ಪ ಸಿ.ಕುಮಾರ್ ಪಾಳ್ಯ, ಉಪನ್ಯಾಸಕ ಡಾ.ಬಿ.ಎಂ.ಗುರುನಾಥ್ ಇದ್ದರು.