

ಚಿತ್ರದುರ್ಗ: ಮೀಸಲು ಸೌಲಭ್ಯ ಮೂಲ ಹಕ್ಕಲ್ಲವೆಂಬ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗಿ ವಾರವಾದರೂ ಅದರ ಕುರಿತಂತೆ ಮೌನವಹಿಸಿರುವ ಕೇಂದ್ರ ನಡೆಯನ್ನು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಖಂಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ವಿಸ್ತೃತ ಅಥವಾ ಸಾಂವಿಧಾನಿಕ ಪೀಠಕ್ಕೆ ಮೇಲ್ಮನವಿ ಸಲ್ಲಿಸುವುದನ್ನು ಕೇಂದ್ರ ನಿರ್ಲಕ್ಷಿಸಿದೆ. ತೀರ್ಪು ಕುರಿತಂತೆ ಪ್ರತಿಕ್ರಿಯೆ ನೀಡದ ತಮ್ಮ ನಡೆಗಾಗಿ ಬಿಜೆಪಿ ನಾಯಕರು ದೇಶದ ಜನರ ಕ್ಷಮೆ ಯಾಚಿಸದಿದ್ದರೆ ಫೆ.15ರಿಂದ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಮೀಸಲು ಸಂವಿಧಾನ ಕೊಟ್ಟಿರುವ ಮೂಲ ಹಕ್ಕು. ಆದರೆ, ಬಿಜೆಪಿ ಶ್ರೇಣಿಕೃತ ವ್ಯವಸ್ಥೆ ಜಾರಿಗೆ ಹವಣಿಸುತ್ತಿದೆ. ಎಸ್ಸಿ, ಎಸ್ಟಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ. ದೇಶದ ಅಭಿವೃದ್ಧಿ ಕಡೆಗಣಿಸಲಾಗಿದೆ. ಜಿಡಿಪಿ ದರ ಶೇ.9ರಿಂದ 3.5ಕ್ಕೆ ಕುಸಿದಿದೆ. ಸಾಲದ ಹೊರೆ 91 ಲಕ್ಷ ಕೋಟಿ ರೂ. ಗೆ ಏರಿದೆ. ಪ್ರತಿಯೊಬ್ಬರ ತಲೆಯ ಮೇಲೆ 27,200 ರೂ. ಸಾಲವಿದೆ ಎಂದು ಹೇಳಿದರು.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮತ್ತೆ 6 ಲಕ್ಷ ಕೋಟಿ ರೂ. ಸಾಲ ತರುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಬಡತನ, ನಿರುದ್ಯೋಗದಂಥ ಸಮಸ್ಯೆ ಹೋಗಲಾಡಿಸುವ ಬದಲು ಜನರ ಭಾವನೆಗಳನ್ನು ಕೆಣಕಲಾಗುತ್ತಿದೆ ಎಂದು ದೂರಿದರು.
ಎಂಎಲ್ಸಿ ಜಯಮ್ಮ ಬಾಲರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಸಿ.ಶಿವುಯಾದವ್, ಆಶಾ ಮೆಹಬೂಬ್ ಖಾತೂನ್, ಓ.ಶಂಕರ್ ಮತ್ತಿತರು ಉಪಸ್ಥಿತರಿದ್ದರು.