

ಚಿತ್ರದುರ್ಗ: ರಾಜ್ಯದಲ್ಲಿ ಜನರ ಸಹಕಾರದಿಂದ ಕರೊನಾ ಹತೋಟಿಯಲ್ಲಿದ್ದು, ಇದಕ್ಕೆ ಪೂರಕವಾಗಿ ಸರ್ಕಾರ ಕಾರ್ಯನಿರ್ವಹಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಮೆಹಬೂಬ್ ಪಾಷಾ ಒತ್ತಾಯಿಸಿದರು.
ಕಿತ್ತಲೆ, ಹಸಿರು ಜೋನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟರೆ, ರೆಡ್ ಜೋನ್ ಪ್ರದೇಶದ ಜನರು ಮದ್ಯಕ್ಕಾಗಿ ಮತ್ತೊಂದು ಜಿಲ್ಲೆಗೆ ಲಗ್ಗೆ ಇಡುತ್ತಾರೆ. ಈ ವೇಳೆ ಕರೊನಾ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಪೌಷ್ಠಿಕಾಹಾರದ ಬ್ಯಾಗ್‌ಗಳ ಮೇಲೆ ತನ್ನ ಹೆಸರು ಮುದ್ರಿಸಿ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಬೆಂಬಲಿಗ ಸಿ.ಮುನಿರಾಜು ಅನೇಕಲ್‌ನಲ್ಲಿ ವಿತರಿಸುತ್ತಿದ್ದಾರೆ. ಇದಕ್ಕೆ ನಾರಾಯಣಸ್ವಾಮಿ ಕುಮ್ಮಕ್ಕು ಇದೆ ಎಂದು ದೂರಿದರು.
ಈ ಕುರಿತಂತೆ ಸಂಸದ ಡಿ.ಕೆ.ಸುರೇಶ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮೊದಲಾದವರು ಮುನಿರಾಜು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ಸಮಗ್ರ ತನಿಖೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಕರೊನಾ ವಿರುದ್ಧ ಯುದ್ಧದಲ್ಲಿ ಕಾಂಗ್ರೆಸ್ ಕೂಡ ಸರ್ಕಾರಗಳ ಜತೆ ನಿಂತಿದೆ. ಆದರೆ, ತಪ್ಪನ್ನು ಎಚ್ಚರಿಸುವ ಪ್ರತಿ ಪಕ್ಷದ ಹೊಣೆಯನ್ನೂ ಕಾಂಗ್ರೆಸ್ ನಿರ್ವಹಿಸುತ್ತಿದೆ. ಲಾಕ್‌ಡೌನ್ ವೇಳೆ ಶೇ.80 ಬಡವರಿಗೆ ನೆರವಾಗಿದ್ದು, ಕಾಂಗ್ರೆಸ್ ಜಾರಿಗೊಳಿಸಿದ್ದ ಕೂಲಿಗಾಗಿ ಕಾಳು ಯೋಜನೆ ಎಂದರು.
ಸರ್ಕಾರವೇ ಸಾರಿಗೆ ವೆಚ್ಚವನ್ನು ಭರಿಸಿ ಕಾರ್ಮಿಕರನ್ನು ಅವರವರ ಸ್ವಂತ ಸ್ಥಳಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ರಾಜಸ್ಥಾನದ ಮಾದರಿ ಕಾರ್ಮಿಕರಿಗೆ ಉಚಿತ ಪ್ರಯಾಣ ಸೌಕರ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಬೇಕು ಎಂದು ಹೇಳಿದರು.
ಚಿತ್ರದುರ್ಗ ರಸ್ತೆ ಹಾಗೂ ನಾನಾ ಸಮುದಾಯ ಭವನಗಳಿಗೆ ನಾನು ಅನುದಾನ ತಂದಿದ್ದೇನೆ ಎಂದಿರುವ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿಕೆಯನ್ನು ಖಂಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಉಪಾಧ್ಯಕ್ಷ ಎಂ.ಅಜ್ಜಪ್ಪ, ಮಾಜಿ ಅಧ್ಯಕ್ಷ ಫಾತ್ಯರಾಜನ್, ರಾಜ್ಯ ಒಬಿಸಿ ಘಟಕ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಮುಖಂಡ ಜಿ.ಮನೋಹರ್ ಮತ್ತಿತರರು ಇದ್ದರು.