

ಚಿತ್ರದುರ್ಗ: ಕರೊನಾ ವಿರುದ್ಧ ಚಿತ್ರದುರ್ಗ ಜಿಲ್ಲೆಯಲ್ಲಿ ಸಮರ ಮುಂದುವರಿದಿದೆ. ರೋಗದ ಸೋಂಕು ಅಥವಾ ಶಂಕಿತ ಪ್ರಕರಣಗಳು ಕಂಡು ಬಂದಿಲ್ಲವಾದರೂ ನಿಯಂತ್ರಣ ಕ್ರಮಗಳೆಡೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.
ಈ ಸಂಬಂಧ ಆರೋಗ್ಯ ಇಲಾಖೆ, ವೈದ್ಯರು, ತಾಪಂ ಇಒಗಳು, ತಹಸೀಲ್ದಾರ್, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಜಿಪಂ ಸಭಾಂಗಣದಲ್ಲಿ ಸೋಮವಾರ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಮಾತನಾಡಿ, ಜಿಲ್ಲೆಯಲ್ಲಿ ಕರೊನಾ ಸೋಂಕು ವರದಿಯಾಗಿಲ್ಲ. ಯಾವುದೇ ಭಯ ಬೇಡ. ಹಾಗಂಥ ಉದಾಸೀನವೂ ಸಲ್ಲದು. ರೋಗ ಬರದಂತೆ ಮುಂಜಾಗ್ರತೆ ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ವೈದ್ಯರು,ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.
ತಾಲೂಕು, ಜಿಲ್ಲಾಸ್ಪತ್ರೆ ಹಾಗೂ ಬಸವೇಶ್ವರ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ಸಜ್ಜು ಗೊಳಿಸಲಾಗಿದೆ. ಬಸ್, ರೈಲು ನಿಲ್ದಾಣಗಳಲ್ಲಿ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ವೈರಸ್ ನಿಯಂತ್ರಣಕ್ಕೆ ನಾಗರಿಕರ ಸಹಕಾರವೂ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಮಾತನಾಡಿ, ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡಬೇಕು. ಬಸ್ , ರೈಲು ನಿಲ್ದಾಣ, ಸಂತೆ ಇತ್ಯಾದಿ ಜನದಟ್ಟಣೆ ಸ್ಥಳಗಳ ಮೇಲೆ ಇಲಾಖೆ ನಿಗಾ ವಹಿಸ ಬೇಕು ಎಂದು ತಿಳಿಸಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್ ಮಾತನಾಡಿ, ಅಮೆರಿಕ ಮತ್ತಿತರ ವಿದೇಶಿ ನಾಗರಿಕರಿಗೆ ಹೋಲಿಸಿದರೆ ಭಾರತೀಯರಲ್ಲಿ ಪ್ರತಿರೋಧ ಶಕ್ತಿ ಅಧಿಕ. ಆದ್ದರಿಂದ ಕರೊನಾ ಬಗ್ಗೆ ವಿನಾ ಕಾರಣ ಆತಂಕ ಬೇಡ. ಸಾಮಾಜಿಕ ಜಾಲ ತಾಣಗಳ ಸಂದೇಶಗಳ ಬಗ್ಗೆ ಅಂಜಿಕೆ ಬೇಡ. ಗ್ರಾಮೀಣ ಪ್ರದೇಶಗಳಲ್ಲಿ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದರು.
ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಮಾತನಾಡಿ, ಜಿಲ್ಲೆಯಲ್ಲಿ ಈ ವರೆಗೆ ಸೋಂಕು ಪ್ರಕರಣ ವರದಿಯಾಗಿಲ್ಲ. ಆದರೂ ಜನ ಹೆಚ್ಚು ಭಯ ಭೀತರಾಗಿದ್ದಾರೆ ಎಂದು ಬೇಸರಿಸಿದರು.
ಎಸ್ಪಿ ಜಿ.ರಾಧಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಜೆ.ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ತುಳಸಿ ರಂಗನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ವಿಶ್ವನಾಥ್,ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಅಧೀಕ್ಷಕ ಡಾ.ಪಾಲಾಕ್ಷಯ್ಯ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ದೀಪಕ್, ಖಾಸಗಿ ವೈದ್ಯರ ಸಂಘದ ಅಧ್ಯಕ್ಷ ಡಾ.ರಂಗಾರೆಡ್ಡಿ, ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ತುಳಸಿ ರಂಗನಾಥ್, ಸಂಪ ನ್ಮೂಲ ವ್ಯಕ್ತಿಗಳಾದ ಎಸ್‌ಎಂಒ ಡಾ.ಶ್ರೀಧರ್,ಡಾ.ಸುಧಾರಾಣಿ, ಡಾ.ಪ್ರಕಾಶ್ ಕಬ್ಬರಗಿ, ಡಾ.ಭರತ್, ಕಂದಾಯ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ ಸ್ವಾಗತಿಸಿ, ಎಂ.ಬಿ.ಹನುಮಂತಪ್ಪ ವಂದಿಸಿದರು.
ಕೈಮಗ್ಗ ಮೇಳ ಮುಂದಕ್ಕೆ: ನಗರದ ಉಮಾಪತಿ ಕಲ್ಯಾಣ ಮಂಟಪದಲ್ಲಿ ಮಾ.17ರಿಂದ ಆಯೋಜಿಸಲು ಉದ್ದೇಶಿಸಿದ್ದ ‘ವಸ್ತ್ರಾಂಜಲಿ-2020’ ವಿಶೇಷ ಕೈಮಗ್ಗ ಮೇಳ-ಕೈಮಗ್ಗ ಉತ್ಪನ್ನಗಳ ಪ್ರದರ್ಶನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ತಿಳಿಸಿದೆ.
ಆಡುಮಲ್ಲೇಶ್ವರ ಮೃಗಾಲಯ ಬಂದ್: ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ಮಾ.15ರಿಂದ 23ರ ವರೆಗೆ ಬಂದ್ ಮಾಡಲಾಗಿದೆ. ಈ ಅವಧಿಯಲ್ಲಿ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಎಂದು ಕಿರುಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.