ಸೇವಾ ಸಿಂಧು ಬಳಸಿ ಸೇವೆ ಪಡೆಯಿರಿ

ADC SANGAPPA (4)
Published on

ಚಿತ್ರದುರ್ಗ: ಸರ್ಕಾರದ ವಿವಿಧ ಇಲಾಖೆಗಳ ಸೇವೆ ಪಡೆಯಲು ಸೇವಾ ಸಿಂಧು ವೆಬ್‌ಪೋರ್ಟಲ್ ಬಳಸುವಂತೆ ಎಡಿಸಿ ಸಿ.ಸಂಗಪ್ಪ ನಾಗರಿಕರಿಗೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಸೇವಾ ಸಿಂಧು ವೆಬ್ ಪೋರ್ಟಲ್ ಹಾಗೂ ಸಕಾಲ ಮಿಷನ್ ಯೋಜನೆಗಳ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ವಿವಿಧ ಇಲಾಖೆಗಳ ಸೇವೆ ಪಡೆಯಲು ಜಿಲ್ಲಾ, ತಾಲೂಕು ಕೇಂದ್ರಗಳಿಗೆ ಬರುವ ಅಗತ್ಯವಿಲ್ಲ. ಸೇವಾ ಸಿಂಧು ಮೂಲಕ ಪಡೆಯಬಹುದು.

49 ಇಲಾಖೆಗಳ 363 ಬಗೆಯ ಸೇವೆಗಳಿಗೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ಗ್ರಾಮಮಟ್ಟದಲ್ಲೇ ಅಗತ್ಯ ಸೇವೆ ಹಾಗೂ ಪ್ರಮಾಣ ಪತ್ರ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಈವರೆಗೆ ಜಿಲ್ಲೆಯಲ್ಲಿ 1.27 ಲಕ್ಷ ಅರ್ಜಿಗಳು ಸೇವಾಸಿಂಧು ವೆಬ್ ಪೋರ್ಟಲ್‌ನಲ್ಲಿ ಸಲ್ಲಿಕೆಯಾಗಿ ವಿಲೇವಾರಿಯಾಗಿವೆ. ಬೇರೆ ರಾಜ್ಯ ಹಾಗೂ ವಿದೇಶಗಳಿಗೆ ತೆರಳಲು ಅನುಮತಿ ಬಯಸುವವರೂ ಸೇವಾಸಿಂಧುವಿನಲ್ಲೇ ಅರ್ಜಿ ಸಲ್ಲಿಸಬೇಕು. ಗ್ರಾಪಂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಕಾಲ ಯೋಜನೆಯಡಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕೋವಿಡ್ ಭೀತಿ ನಡುವೆ ಜೂನ್‌ನಲ್ಲಿ ಚಿತ್ರದುರ್ಗ ಜಿಲ್ಲೆ ಮೊದಲನೇ ರ‌್ಯಾಂಕಿಂಗ್‌ನಲ್ಲಿದೆ ಎಂದರು.

ಸಕಾಲ ತಂತ್ರಾಂಶದಲ್ಲಿ ಅರ್ಜಿ ಸ್ವೀಕರಿಸದ ಪಶುಸಂಗೋಪನೆ, ಪೊಲೀಸ್, ರೇಷ್ಮೆ, ಗ್ರಂಥಾಲಯ, ಕೈಮಗ್ಗ ಮತ್ತು ಜವಳಿ, ಸಹಕಾರ, ಕನ್ನಡ ಮತ್ತು ಸಂಸ್ಕೃತಿ, ಅರಣ್ಯ, ಲೋಕೋಪಯೋಗಿ ಸೇರಿ ವಿವಿಧ ಇಲಾಖೆಗಳ ಸಾಧನೆ ಶೂನ್ಯವಾಗಿದೆ. ಈ ಧೋರಣೆ ಇದೇ ರೀತಿ ಮುಂದುವರಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆ ಮಾಡುವುದಾಗಿ ಎಚ್ಚರಿಸಿದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ ಕುಮಾರ್, ಸಕಾಲ ಮತ್ತು ಸೇವಾ ಸಿಂಧು ಯೋಜನಾ ವ್ಯವಸ್ಥಾಪಕ ಸಮರ್ಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net