

ಎನ್.ಆರ್.ಪುರ: ಸಾಣೆಹಳ್ಳಿಯಲ್ಲಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. ಕಥಾ ಕಮ್ಮಟಗಳನ್ನು ಆಯೋಜಿಸುವುದರ ಮೂಲಕ ಕಥೆಗಾರರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಮಂಗಳವಾರ ತಾಲೂಕು ಕಸಾಪ ಸೇವಾ ದೀಕ್ಷೆ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ, ಕಲೆಗೆ ಸೀಮಿತವಾಗಿಲ್ಲ. ನೆಲ, ಜಲ, ನುಡಿ ವಿಚಾರ ಬಂದಾಗ ಬೀದಿಗಳಿದು ಹೋರಾಟ ಮಾಡಲೂ ಸಿದ್ಧವಾಗಿದೆ ಎಂದರು.
ನಾಡು ನುಡಿ, ಜಲ ಪರಿಕಲ್ಪನೆ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಕಾವೇರಿ ಜಲಕ್ಕೆ ಕೂಗು ಹೆಚ್ಚಾಗಿದೆ. ನಮಗೇ ನೀರಿಲ್ಲ. ಇನ್ನು ಬೇರೆಯವರಿಗೆ ನೀರನ್ನು ಹರಿಯ ಬಿಡುವುದು ಎಷ್ಟರ ಮಟ್ಟಿಗೆ ಸರಿ? ಕಾವೇರಿ ನಮ್ಮದು. ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಡ್ಯಾಂನ ಎಲ್ಲ ಗೇಟುಗಳನ್ನು ತೆರೆದು ನೀರು ಹರಿಸುವುದು ಸರಿಯಲ್ಲ ಎಂದು ಹೇಳಿದರು.
ವಿಧಾನಸಭೆಯಲ್ಲಿ ಕನ್ನಡ ವಿಧೇಯಕ ಅಂಗೀಕಾರ ಮಾಡಲಾಗಿದೆ. ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯವರೆಗಾದರೂ ಕಲಿಸಬೇಕು. ಇಂಜಿನಿಯರಿಂಗ್, ವೈದ್ಯಕೀಯ ವ್ಯಾಸಂಗವನ್ನು ಆಂಗ್ಲ ಮಾಧ್ಯಮದಲ್ಲೇ ಮಾಡಬೇಕು. ಆದ್ದರಿಂದ ತಾಂತ್ರಿಕ ವಿಷಯಗಳ ಪದವಿ ಕನ್ನಡ ಮಾಧ್ಯಮದಲ್ಲಿ ಬೋಧಿಸಿ ಗ್ರಾಮೀಣ ಭಾಗದ ಕನ್ನಡ ಮಕ್ಕಳೂ ತಾಂತ್ರಿಕ ವಿಷಯಗಳಲ್ಲಿ ಪದವಿ ಪಡೆಯುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮಾತನಾಡಿ, ಸಾಹಿತ್ಯ ಹಾಗೂ ಸಂಗೀತದಿಂದ ಬೌದ್ಧಿಕ, ಆಂತರಿಕ ಶ್ರೀಮಂತಿಕೆ ಹೆಚ್ಚಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಕನ್ನಡ ಲಿಪಿ 2500 ವರ್ಷದಿಂದಲೂ ಇದೆ. ಕನ್ನಡವನ್ನು ಬಳಸಿದರೆ ತಾನಾಗಿಯೇ ಉಳಿಯುತ್ತದೆ ಎಂದು ಹೇಳಿದರು.
ಕಸಾಪ ನೂತನ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್, ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್, ಎಚ್.ಡಿ.ವಿನಯಕುಮಾರ್, ಡಿ.ರಮೇಶ್, ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್, ಜಿಲ್ಲಾ ಸಂಚಾಲಕ ಬಿ.ನಂಜುಂಡಪ್ಪ ಮಾತನಾಡಿದರು.
ಕಸಾಪ ಪೂರ್ವಾಧ್ಯಕ್ಷರಾದ ಯಜ್ಞಪುರುಷ ಭಟ್, ಮೀನಾಕ್ಷಿ ಕಾಂತರಾಜ್, ಪಿ.ಕೆ.ಬಸವರಾಜ್, ಎಸ್.ಎಸ್.ಸಂತೋಷ್‌ಕುಮಾರ್, ಎನ್.ಎಂ.ಕಾಂತರಾಜ್, ಉದ್ಯಮಿ ಡಿ.ರಮೇಶ್, ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಂಜಪ್ಪ, ಶಿಕ್ಷಕಿ ನೇತ್ರಾವತಿ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಟಿ.ಡಿ.ರಾಜೇಗೌಡ ಅವರ ಪುತ್ರ ರಾಜ್‌ದೇವ್, ಪುಷ್ಪಾ ರಾಜೇಗೌಡ, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ, ಕಸಾಪ ಬಾಳೆಹೊನ್ನೂರು ಹೋಬಳಿ ಅಧ್ಯಕ್ಷ ಜಿ.ಎಸ್.ರತ್ನಾಕರ್, ಕೆ.ಎಸ್.ರಾಜಕುಮಾರ್, ಅತೀಶ್ ಅರಳಿಕೊಪ್ಪ ಇತರರಿದ್ದರು.