

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಆರೋಗ್ಯ ಇಲಾಖೆಯ ಇಬ್ಬರು ನೌಕರರನ್ನು ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಿಂದ ಗುರುವಾರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ತಿಳಿಸಿದರು.
ಗುರುವಾರ ಬಿಡುಗಡೆ ಬಳಿಕ ಮಾತನಾಡಿ, ಚಳ್ಳಕೆರೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಶ್ರಮಿಸಿದ್ದ ಇವರಿಗೆ ಸೋಂಕು ತಗುಲಿದ್ದು, ಇದೀಗ ಇವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇಬ್ಬರಿಗೂ 7 ದಿನಗಳ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಚ್.ಜೆ.ಬಸವರಾಜಪ್ಪ, ಡಾ.ಬಿ.ಜಯಮ್ಮ, ಡಾ.ಬಿ.ವಿ.ಗಿರೀಶ್, ಸಹಾಯಕ ಆಡಳಿತಾಧಿಕಾರಿ ಅಸ್ಲಾಂ, ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್, ಮೂಗಪ್ಪ, ಎಚ್.ಬಿ.ಪೂಜಾರ್, ರಂಗಾರೆಡ್ಡಿ, ಹನುಮಂತಪ್ಪ, ಪ್ರಸನ್ನ ಮತ್ತಿತರರು ಇದ್ದರು.
2722 ಜನ ಹೋಂ ಕ್ವಾರಂಟೈನ್‌ನಲ್ಲಿ: ಜಿಲ್ಲೆಯಲ್ಲಿ ಗುರುವಾರ 58 ಜನರ ಗಂಟಲು, ಮೂಗು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲ 58 ವರದಿಗಳು ನೆಗೆಟಿವ್ ಬಂದಿದೆ. ಸದ್ಯ ಜಿಲ್ಲೆಯಲ್ಲಿ 2722 ಜನ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 43 ಇದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ. ಈವರೆಗೆ 4214 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ. 4047 ಜನರ ವರದಿ ನೆಗೆಟೀವ್ ಬಂದಿದೆ, ಉಳಿದ 126ನ್ನು ತಿರಸ್ಕರಿಸಲಾಗಿದೆ.