

ವಿಜಯವಾಣಿ ವಿಶೇಷ ಚಿತ್ರದುರ್ಗ: ಕರೊನಾ ಭೀತಿ ಬೆನ್ನಲ್ಲೆ ಬಿಸಿಲಿನಿಂದ ಏರುತ್ತಿರುವ ತಾಪಮಾನಕ್ಕೂ ಜನ ಹೈರಾಣಾಗುತ್ತಿದ್ದಾರೆ.
ಜಿಲ್ಲಾದ್ಯಂತ ಬಿಸಿಲಿನ ಬೇಗೆ ಮಧ್ಯಾಹ್ನ 2ರ ಹೊತ್ತಿಗೆ 35,36 ಡಿಗ್ರಿ ಸೆಲ್ಸಿಯಸ್ ಆಸುಪಾಸಿದ್ದು, ಧಗೆ ನಿವಾರಿಸಿಕೊಳ್ಳಲು ಮಜ್ಜಿಗೆ, ಎಳನೀರು, ತಂಪು ಪಾನೀಯ, ಕಲ್ಲಂಗಡಿ ಇತ್ಯಾದಿ ಹಣ್ಣುಗಳಿಗೆ ಮೊರೆ ಹೋಗಲಾರಂಭಿಸಿದ್ದಾರೆ.
ಕಳೆದ ವರ್ಷವೂ ಹೆಚ್ಚು ಕಡಿಮೆ ಇದೇ ತಾಪಮಾನವಿದ್ದರೂ, ಅಂದಿನ ಸನ್ನಿವೇಶದಲ್ಲಿದ್ದ ನೀರಿನ ವ್ಯಾಪಕ ಕೊರತೆಯಿಂದಾಗಿ ಜನ-ಜಾನುವಾರುಗಳು ಸಾಕಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಸತತ ಬರಗಾಲವೂ ಕಳೆದ ವರ್ಷದಲ್ಲಿ ಕುಡಿವ ನೀರಿನ ಬವಣೆಯನ್ನು ಅಧಿಕಗೊಳಿಸಿತ್ತು.
ಕೊಳವೆ ಬಾವಿಗಳು ಬತ್ತಿದ್ದರಿಂದಾಗಿ ರೈತರು ಸಾವಿರಾರು ಖರ್ಚು ಮಾಡಿ ಟ್ಯಾಂಕರ್‌ಗಳಲ್ಲಿ ನೀರು ತಂದು ತೋಟಗಳನ್ನು ಉಳಿಸಿಕೊಳ್ಳುವ ಹರಸಾಹಸ ನಡೆಸಿದ್ದರು. ಆದರೆ, ಈ ಬಾರಿ ಕಳೆದ ನವೆಂಬರ್ ನಂತರದಲ್ಲಾದ ಮಳೆಯಿಂದಾಗಿ ತುಂಬಿದ ಕೆರೆಕಟ್ಟೆ, ಅಂತರ್ಜಲ ಪ್ರಮಾಣದಲ್ಲೂ ಸುಧಾರಣೆ ಕಂಡು ಬಂದಿತ್ತು.
ಆದರೆ, ಈಗ ಮತ್ತೆ ನೀರಿನ ಸಮಸ್ಯೆ ಎದುರಾಗುತ್ತಿದ್ದು, ವಿದ್ಯುತ್ ಪೂರೈಕೆಯಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಇಲ್ಲದ್ದರಿಂದಾಗಿ ಫ್ಯಾನ್, ಎಸಿ, ಕೂಲರ್ ಕಾಡುವ ಧಗೆ ತಣ್ಣಗಾಗಿಸಲು ಅನುಕೂಲವಾಗುತ್ತಿದೆ.
ಆದರೆ, ಚಿತ್ರದುರ್ಗ ನಗರ ಮತ್ತು ರಾ.ಹೆ.ಗಳಲ್ಲಿ ಆಗುತ್ತಿರುವ ಕಾಮಗಾರಿಗಳಿಂದಾಗಿ ಏಳುತ್ತಿರುವ ಧೂಳು ಜನರನ್ನು ಕಾಯಿಲೆಗಳಿಗೆ ನೂಕುತ್ತಿದೆ. ಕಾಮಗಾರಿ ವೇಳೆ ನೀರು ಸಿಂಪಡಿಸಿ ಕೆಲಸ ಮಾಡಿಸಬೇಕೆಂದಿದ್ದರೂ ಗುತ್ತಿಗೆದಾರರ ನಿರ್ಲಕ್ಷೃದಿಂದಾಗಿ ಧೂಳಿನಲ್ಲೇ ಜನರು ಅಡ್ಡಾಡುವಂತಾಗಿದೆ.
ಕಾಲರಾ ಭೀತಿ: ಬೇಸಿಗೆಯಲ್ಲಿ ಕಾಲರಾ ಸಹಿತ ನಾನಾ ಸಾಂಕ್ರಾಮಿಕ ರೋಗಗಳು ಕಾಡಲಿವೆ. ಆದ್ದರಿಂದ ಜನರು ಕಲುಷಿತ ನೀರು, ಬೀದಿ ಬದಿ ಹಣ್ಣು, ತಿನಿಸುಗಳನ್ನು ಸೇವಿಸದಂತೆ ಆರೋಗ್ಯ ಇಲಾಖೆ ಮನವಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿಗೂ ಮುಂದಾಗಿದೆ.
ಆಸ್ಪತ್ರೆಗಳಲ್ಲಿ ಒಆರ್‌ಎಸ್ ಕಾರ್ನರ್: ಕಾಲರಾ, ವಾಂತಿ-ಭೇದಿ ಪ್ರಕರಣಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ತನ್ನೆಲ್ಲ ಆಸ್ಪತ್ರೆಗಳಲ್ಲಿ ಒಆರ್‌ಎಸ್ ಕಾರ್ನರ್‌ಗಳನ್ನು ಆರಂಭಿಸಲಿದೆ ಎಂದು ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ತಿಳಿಸಿದ್ದಾರೆ. ವಾಂತಿಭೇದಿ ಪ್ರಕರಣ ಕಂಡು ಬಂದ ತಕ್ಷಣ ಕೂಡಲೇ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಕಾಲರಾ ಸಹಿತ ಯಾವುದೇ ಸಾಂಕ್ರಾಮಿಕ ರೋಗ ಪ್ರಕರಣಗಳು ಸದ್ಯಕಂತೂ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
ಹೋಟೆಲ್ ಮಾಲೀಕರ ಸಭೆ: ಆಹಾರ ಸುರಕ್ಷತಾ ಇಲಾಖೆ ಹೋಟೆಲ್ ಮಾಲೀಕರ ಸಭೆ ನಡೆಸಿ, ಗ್ರಾಹಕರಿಗೆ ಬಿಸಿ ಅಥವಾ ಶುದ್ಧೀಕರಿಸಿದ ನೀರು ಕೊಡಲು ತಾಕೀತು ಮಾಡಲಿದೆ. ಅಡುಗೆ ಕೋಣೆ ಸಹಿತ ಹೋಟೆಲ್‌ನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇನ್ನು ಬೀದಿ ಬದಿ ತಿಂಡಿ ತಿನಿಸು ಮಾರುವವರು ಕೂಡ ಶುದ್ಧೀಕರಿಸಿದ ನೀರನ್ನು ಗ್ರಾಹಕರಿಗೆ ಕೊಡಬೇಕು. ಇಡ್ಲಿ ತಯಾರಿಕೆ ವೇಳೆ ಹಾಗೂ ಉಪಹಾರ ಸೇವಿಸಲು ಪ್ಲಾಸ್ಟಿಕ್ ಬಳಕೆ ಬಳಸಿದರೆ ಕ್ರಮ ಖಚಿತ ಎಂದು ಆಹಾರ ಸುರಕ್ಷತಾ ಅಧಿಕಾರಿ ಕಾಂತರಾಜ್ ಎಚ್ಚರಿಸಿದ್ದಾರೆ.