

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ದೂರಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಜನ ಗಾಂಧಿ ವಿರೋಧಿಗಳಿಗೆ ಅಧಿಕಾರ ಕೊಟ್ಟು ಈಗ ಪರಿತಪಿಸುತ್ತಿದ್ದಾರೆ ಎಂದು ಹೇಳಿದರು.
ಸಿಎಎ ಜಾರಿ ಮೂಲಕ ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಎಂಬುದು ಸಾಬೀತು ಮಾಡಿದೆ. ಉದ್ಯೋಗ ಸೃಷ್ಟಿಯ ಬದಲು ಲಾಭದಲ್ಲಿರುವ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುತ್ತಿದ್ದು, ಬಿಜೆಪಿ ನಾಯಕರ ವರ್ತನೆಗೆ ಕಾಣದ ಶಕ್ತಿಗಳು ಕಾರಣವಾಗಿವೆ ಎಂದು ಆರೋಪಿಸಿದರು.
ಸ್ವಾತಂತ್ರೃ ಚಳವಳಿ ಮಾದರಿ ವಿದ್ಯಾರ್ಥಿಗಳಿಂದು, ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ಹೋರಾಟಕ್ಕೆ ಧುಮುಕುತ್ತಿದ್ದಾರೆ. ಆಡಳಿತ ವೈಫಲ್ಯವನ್ನು ಪ್ರಧಾನಿ ಹಾಗೂ ಗೃಹಸಚಿವರು ಮುಚ್ಚಿ ಹಾಕಿ ಜನರ ಗಮನ ಬೇರೆಡೆ ಸೆಳೆಯಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿಶ್ವದ ಯಾವುದೇ ದೇಶದಲ್ಲೂ ಧರ್ಮದ ಆಧಾರದಡಿ ಪೌರತ್ವ ನೀಡುವ ಕಾನೂನು ಇಲ್ಲ ಎಂದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಮೋದಿ ಹಾಗೂ ಅಮಿತ್ ಶಾ ಅವರಿಂದ ದೇಶದ ಅಭಿವೃದ್ಧಿ ಅಧೋಗತಿಗೆ ಇಳಿಯುತ್ತಿದೆ. ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ ಎಂದು ಹೇಳಿದರು.
ಆರ್ಥಿಕ ಸ್ಥಿತಿ ಸರಿಪಡಿಸದಿದ್ದರೆ ಬಿಜೆಪಿ ಮುಕ್ತ ಭಾರತವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಸುಬ್ರಮಣ್ಯಸ್ವಾಮಿ ಅವರೇ ಎಚ್ಚರಿಸಿರುವುದು ಬಿಜೆಪಿಗೆ ಎಚ್ಚರಿಕೆ ಗಂಟೆ ಎಂದರು.
ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಅಧ್ಯಕ್ಷ ಫಾತ್ಯರಾಜನ್, ಕಾರ್ಯಾಧ್ಯಕ್ಷ ಶಿವುಯಾದವ್, ಬಾಲಕೃಷ್ಣ, ಜಿಪಂ ಸದಸ್ಯ ಆರ್.ನರಸಿಂಹರಾಜ, ಮಧುಸೂದನ್ ಮೊದಲಾದ ಪ್ರಮುಖರು ಇದ್ದರು.
ಭದ್ರೆ ಖರ್ಚು 20 ಸಾವಿರ ಕೋಟಿ ರೂ.: ರಾಜ್ಯದ ನೀರಾವರಿಗೆ 50 ಸಾವಿರ ಕೋಟಿ ರೂ. ಹಾಗೂ ಪ್ರವಾಹ ಪರಿಹಾರಕ್ಕೆ 30 ಸಾವಿರ ಕೋಟಿ ರೂ. ಕೊಡಬೇಕೆಂಬ ಸಿಎಂ ಯಡಿಯೂರಪ್ಪ ಮಾಡಿಕೊಂಡ ಮನವಿಯನ್ನು ಪ್ರಧಾನಿ ಮೋದಿ ಕಡೆಗಣಿಸಿದ್ದಾರೆ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ವೆಚ್ಚವೇ ಈಗ 20 ಸಾವಿರ ಕೋಟಿ ರೂಪಾಯಿಗೆ ಏರಲಿದೆ ಎಂದು ಉಗ್ರಪ್ಪ ಅಂದಾಜಿಸಿದರು.