

ಚಿತ್ರದುರ್ಗ: ಎರಡು ತಿಂಗಳ ಸುದೀರ್ಘ ಅವಧಿ ನಂತರದಲ್ಲಿ ಅಂತರ್ ಜಿಲ್ಲೆಗಳಿಗೆ ಮೇ 19ರಿಂದ ಕೆಲ ಷರುತ್ತುಗಳನ್ನಾಧರಿಸಿ ಕೆಎಸ್‌ಆರ್ ಟಿಸಿ ಬಸ್ ಸಂಚಾರ ಆರಂಭವಾಗಲಿದೆ.
ಚಿತ್ರದುರ್ಗದಿಂದ ಶಿವಮೊಗ್ಗ, ದಾವಣಗೆರೆ, ಹಾಸನ, ಬಳ್ಳಾರಿ, ಹೊಸಪೇಟೆ, ಬೆಂಗಳೂರು ಮೊದಲಾದ ಸ್ಥಳಗಳಿಗೆ ನೇರ ಬಸ್ ಸಂಚಾರ (ಪಾಯಿಂಟ್-ಪಾಯಿಂಟ್) ಚಾಲನೆ ಪಡೆದುಕೊಳ್ಳಲಿದೆ.
ಈಗಾಗಲೇ ಚಿತ್ರದುರ್ಗದಿಂದ ತಾಲೂಕು ಕೇಂದ್ರಗಳಿಗೆ ನೇರ ಬಸ್ ಸಂಚಾರವಿದೆ. ಈಗ ನಿಗಮದ ಚಿತ್ರದುರ್ಗ ವಿಭಾಗಕ್ಕೆ ಸೇರಿದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಮತ್ತು ಪಾವಗಡ ಘಟಕಗಳಿಂದ ಬೆಂಗಳೂರು ಸೇರಿ ಇತರೆ ಜಿಲ್ಲಾ ಕೇಂದ್ರಗಳ ನಡುವೆ ಬಸ್ ಸಂಚಾರ ಆರಂಭವಾಗಲಿದೆ.
ಪ್ರಯಾಣಿಕರ ಹಿತದೃಷ್ಟಿಯಿಂದ ಪ್ರಯಾಣಿಕರ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಲಾಗಿದೆ. ಎಕ್ಸ್‌ಪ್ರೆಸ್ ಮತ್ತು ರಾಜಹಂಸ ಬಸ್‌ಗಳನ್ನು ಓಡಿಸಲಾಗುವುದು.
ಹವಾನಿಯಂತ್ರಿತ ಬಸ್, ನಗರ ಸಾರಿಗೆ ಮತ್ತು ಗ್ರಾಮಾಂತರ ಸಾರಿಗೆ ಬಸ್ ಸಂಚಾರ ಇರದು. ಪ್ರಯಾಣಿಕರ ಬೇಡಿಕೆ ಆಧರಿಸಿ ಅಂತರ ಜಿಲ್ಲಾ ಕೇಂದ್ರಗಳ ನಡುವೆ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಬಸ್ ಸಂಚಾರ ನಡೆಯಲಿದೆ.
ಪ್ರಯಾಣಿಕರು ಮಾಸ್ಕ್ ಧರಿಸಿ, ಸಾಮಾಜಿಕ ಸುರಕ್ಷತೆ ಕಾಯ್ದುಕೊಳ್ಳುವುದು ಕಡ್ಡಾಯವೆಂದು ನಿಗಮದ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ.