

ಚಿತ್ರದುರ್ಗ: ಜಿಲ್ಲೆಯ ಕೆ.ಆರ್.ಹಳ್ಳಿ ಗೇಟ್ ಬಳಿ ಬುಧವಾರ ಬೆಂಕಿಗಾಹುತಿಯಾದ ಖಾಸಗಿ ಬಸ್ನಿಂದ ಬೆಂಗಳೂರು ಮೂಲದ ಪ್ರಯಾಣಿಕನೊಬ್ಬ ಕಾಣೆಯಾಗಿರುವುದು ಹಿರಿಯೂರು ಗ್ರಾಮಾಂತರ ಪೊಲೀಸರನ್ನು ಕಂಗೆಡಿಸಿದೆ.
ವಿಜಯಪುರದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಅದರಲ್ಲಿದ್ದ 29 ಪ್ರಯಾಣಿಕರ ಪೈಕಿ ಮೂವರು ಮಕ್ಕಳ ಸಹಿತ ಐವರು ಮೃತಪಟ್ಟಿದ್ದರು. ಉಳಿದ 24 ಜನರ ಪೈಕಿ 23 ಪ್ರಯಾಣಿಕರನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಘಟನೆ ನಡೆದ ವೇಳೆಯಿಂದ ಸುರೇಶ್(34) ಎಂಬುವರ ಮೊಬೈಲ್ ಸ್ವಿಚ್ಡ್ಆಫ್ ಆಗಿದ್ದು, ಈವರೆಗೂ ಆತನ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ.
ತನ್ನ ಮನೆಯವರನ್ನೂ ಸುರೇಶ್ ಸಂರ್ಪಸಿಲ್ಲ. ಬಸ್ನಲ್ಲಿದ್ದಾತ ಎಲ್ಲಿಗೆ ಹೋದ, ಯಾಕೆ ಮನೆಗೆ ಬಂದಿಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗದೆ ಕುಟುಂಬದ ಸದಸ್ಯರು ಕಂಗೆಟ್ಟಿದ್ದಾರೆ.
ಘಟನೆಗೂ ಮುನ್ನ ಆತ ಕೊನೆಯದಾಗಿ ಯಾರೊಂದಿಗೆ ಫೋನ್ ಮೂಲಕ ಮಾತನಾಡಿದ್ದ ಎಂಬ ವಿವರ ಪಡೆದ ಪೊಲೀಸರ ತಂಡ ಮೈಸೂರು ಮತ್ತಿತರೆಡೆಗೆ ತೆರಳಿದೆ.
ಈ ನಡುವೆ, ಕಾಣೆಯಾಗಿದ್ದ ಸುರೇಶ್ ಕೊನೆಗೂ ಕುಟುಂಬದವರೊಂದಿಗೆ ಮಾತನಾಡಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನಲೆಯಲ್ಲಿ ಅವರು ಮನೆಗೆ ಹೋಗಿರಲಿಲ್ಲ. ಆದರೆ ಅವರು ಸುರಕ್ಷಿತವಾಗಿ ಇದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.