

ಚಿತ್ರದುರ್ಗ: ಚುನಾವಣೆ ನಡೆದು 2 ವರ್ಷ ಸಮೀಪಿಸುತ್ತಿದ್ದರೂ ರಾಜ್ಯದಲ್ಲಿ ಇನ್ನೂ ಅಸ್ತಿತ್ವಕ್ಕೆ ಬಾರದ ಕೌನ್ಸಿಲ್‌ಗಳಿಂದ ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿಗಳು ಪ್ರಸಕ್ತ ಸಾಲಿನ ಬಜೆಟ್ ಅನುಮೋದಿಸಿದ್ದಾರೆ. ಆದರೆ ಬಜೆಟ್ ನಿರೀಕ್ಷೆಯಂತೆ ಸರ್ಕಾರಿ ಅನುದಾನಗಳು ಸಕಾಲಕ್ಕೆ ದೊರೆಯುವುದೇ ಎಂಬ ಯಕ್ಷಪ್ರಶ್ನೆ ಎದುರಾಗಿದೆ.
ಕೋವಿಡ್-19 ಹಾವಳಿ ಇಷ್ಟೊಂದು ಭೀಕರ, ಇಡೀ ದೇಶವೇ ಸುದೀರ್ಘ ಅವಧಿಗೆ ಲಾಕ್‌ಡೌನ್ ಆಗುತ್ತದೆಂದು ಬಜೆಟ್ ಅನುಮೋದನೆ ವೇಳೆ ಯಾರೂ ಊಹಿಸಿರಲಿಲ್ಲ. ಆದರೆ ಈಗ ಹನುಮಂತಪ್ಪನೇ ಹಗ್ಗ ಕಡಿಯುತ್ತಿರುವಾಗ ಪೂಜಾರಪ್ಪ ಶಾವಿಗೆ ಕೇಳಿದ ಎಂಬಂತೆ ಸರ್ಕಾರಗಳೀಗ ಖರ್ಚು-ವೆಚ್ಚದ ಬಗ್ಗೆ ಚಿಂತಿಸುತ್ತಿರುವಾಗ, ಬರಬೇಕಿರುವ ಅನುದಾನಗಳ ಕತೆ ಏನೆಂಬ ಆತಂಕ ಸ್ಥಳೀಯ ಸಂಸ್ಥೆಗಳಲ್ಲಿ ಮೂಡಿದೆ.
ನಗರಸಭೆ, ಪುರಸಭೆ, ಪ.ಪಂ.ಗಳಲ್ಲಿ ಸ್ಥಳೀಯ ಆದಾಯ ಹೊರತುಪಡಿಸಿ, 14 ನೇ ಹಣಕಾಸು ನಿಧಿ, ಎಸ್‌ಇಪಿ-ಟಿಎಸ್‌ಪಿ, ವೇತನ, ವಿದ್ಯುತ್, ಕುಡಿವ ನೀರು, ವಿಶೇಷ ಅನುದಾನ, ಅಮೃತ್, ನಲ್ಮ ಹಾಗೂ ಕೆಯು ಐಡಿಎಫ್‌ಸಿ ಭದ್ರತಾ ಸಾಲ ಇತ್ಯಾದಿ ಅನುದಾನಗಳ ನಿರೀಕ್ಷೆಯೊಂದಿಗೆ 2020-21ನೇ ಸಾಲಿನ ಬಜೆಟ್‌ಗೆ ನಗರಸಭೆ, ಪುರಸಭೆ, ಪಪಂಗಳ ಆಡಳಿತಾಧಿಕಾರಿಗಳು ಅನುಮೋದನೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಉಳಿತಾಯ ಬಜೆಟ್ ಅಂಗೀಕರಿಸಿವೆ. ಚಿತ್ರದುರ್ಗ, ಹಿರಿಯೂರು ಹಾಗೂ ಚಳ್ಳಕೆರೆ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಆಯಾ ಸಂಸ್ಥೆಗಳ ಉಳಿತಾಯ ಬಜೆಟ್‌ಗೆ ಕಳೆದ ತಿಂಗಳು ಅನುಮೋದನೆ ನೀಡಿದ್ದಾರೆ. ಇವರಂತೆಯೇ ಹೊಸದುರ್ಗ ಪುರಸಭೆ ಬಜೆಟ್‌ಗೆ ಉಪವಿಭಾಗಾಧಿಕಾರಿ ವಿ.ಪ್ರಸನ್ನ ಹಾಗೂ ಹೊಳಲ್ಕೆರೆ, ಮೊಳಕಾಲ್ಮೂರು ಹಾಗೂ ನಾಯಕನಹಟ್ಟಿ ಪಪಂಗಳ ಬಜೆಟ್‌ಗೆ ತಹಸೀಲ್ದಾರ್‌ಗಳು ಅನುಮೋದನೆ ಕೊಟ್ಟಿದ್ದಾರೆ.
ಅಭಿವೃದ್ಧಿಗೆ ಹಣದ ಕೊರತೆ: 174.24 ಕೋಟಿ ರೂ.ಆದಾಯ ಹಾಗೂ 173.04 ಕೋಟಿ ರೂ.ವೆಚ್ಚದ ಬಜೆಟ್ ಸಿದ್ಧಪಡಿಸಿರುವ ಚಿತ್ರದುರ್ಗ ನಗರಸಭೆಯಲ್ಲೂ ಆತಂಕ ವ್ಯಕ್ತವಾಗಿದೆ. ಸರ್ಕಾರದಿಂದ ಸಕಾಲಕ್ಕೆ ಸಾಲ ಸಿಗದಿದ್ದರೆ ಈ ವರ್ಷವೂ ಚಿತ್ರದುರ್ಗದ ಗಾಂಧಿ ಸರ್ಕಲ್, ಸಂತೆ ಹೊಂಡ ಹಾಗೂ ತ್ಯಾಗರಾಜ ಬೀದಿ ಮಾರುಕಟ್ಟೆಗಳ ನಿರ್ಮಾಣ ಪೂರ್ಣವಾಗದು.
ತ್ಯಾಜ್ಯನಿರ್ವಹಣೆ ಘಟಕದ ಅಭಿವೃದ್ಧಿಗೆ ಹಣದ ಕೊರತೆ ಬೀಳಬಹುದು ಹಾಗೂ ನಗರಸಭೆ ಕಚೇರಿ ಮೇಲೆ ಅಸ್ತಿಪಂಜರದಂತೆ ಕಾಣುತ್ತಿರುವ ಹೈಟೆಕ್ ಮೀಟಿಂಗ್ ಹಾಲ್‌ಗೂ ಮುಕ್ತಿ ಸಿಗದು. ಕೆಯುಐಡಿಎಫ್‌ಸಿ 40 ಕೋಟಿ ರೂ.ಸಾಲದ ನಿರೀಕ್ಷೆಯೊಂದಿಗೆ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಬಜೆಟ್‌ನಲ್ಲಿ ಹಸಿರು ನಿಶಾನೆ ತೋರಿಸಲಾಗಿದೆ. ಆದರೆ ಈಗ ಅಭಿವೃದ್ಧಿ ಕೆಲಸಗಳಿಗೆ ಕೈ ಹಾಕುವಾಗ ಹತ್ತು ಬಾರಿ ಆಲೋಚಿಸುವಂತಾಗಿದೆ ಎಂದು ಹೇಳುತ್ತಿದ್ದಾರೆ.
ಕೋಟೆನಾಡಿನ ಉಳಿತಾಯ ಬಜೆಟ್(ಲಕ್ಷ ರೂ.ಗಳಲ್ಲಿ)
ಚಿತ್ರದುರ್ಗ-120. ಚಳ್ಳಕೆರೆ-69. ಹಿರಿಯೂರು-45. ಹೊಸದುರ್ಗ-42. ಹೊಳಲ್ಕೆರೆ-38. ಮೊಳಕಾಲ್ಮೂರು-41. ನಾಯಕನಹಟ್ಟಿ-23.