ವಿವಿ ಸಾಗರಕ್ಕೆ 10 ಟಿಎಂಸಿ ಅಡಿ ನೀರು ಕೊಡಿ

THIPPAREDDY (3)
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳೆರಡರಲ್ಲೂ ವಾಣಿ ವಿಲಾಸ ಸಾಗರಕ್ಕೆ 10 ಟಿಎಂಸಿ ಅಡಿ ನೀರು ಹಂಚಿಕೆ ಮಾಡುವಂತೆ ಒತ್ತಾಯಿಸಿ ಶಾಸಕ ತಿಪ್ಪಾರೆಡ್ಡಿ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಪತ್ರ ಬರೆದಿರುವ ಶಾಸಕರು, ದೇಶದ ಅತಿ ಹಿಂದುಳಿದ 16 ಜಿಲ್ಲೆಗಳಲ್ಲಿ ಒಂದಾದ ಚಿತ್ರದುರ್ಗ, ಕಳೆದ 100 ವರ್ಷಗಳಲ್ಲಿ 70 ವರ್ಷ ಬರವನ್ನು ಕಂಡಿದೆ ಎಂದು ತಿಳಿಸಿದ್ದಾರೆ.

ಒಂದು ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಗಾಗಿ ಹಾಹಾಕಾರ ಸದಾ ಇರುತ್ತದೆ. ಜಿಲ್ಲಾ ಕೇಂದ್ರ ಸೇರಿ ಹಿರಿಯೂರು, ಚಳ್ಳಕೆರೆ ನಗರಗಳು ಮತ್ತು ಮಾರ್ಗ ಮಧ್ಯ ಬರುವ ಹಳ್ಳಿಗಳಿಗೆ, ಡಿಆರ್‌ಡಿಒ ಸಹಿತ ನಾನಾ ವಿಜ್ಞಾನ ಸಂಸ್ಥೆಗಳಿಗೆ ಕುಡಿಯುವ ನೀರು ಪೂರೈಕೆಗೆಂದು ಈಗಾಗಲೇ ಹಂಚಿಕೆಯಾಗಿರುವ ವಾರ್ಷಿಕ 2 ಟಿಎಂಸಿ ಅಡಿ ನೀರು ಯಾವುದಕ್ಕೂ ಸಾಲದು.

ಹೊಸದುರ್ಗ ಪಟ್ಟಣ, ಹಿರಿಯೂರು ತಾಲೂಕಿನ ಧರ್ಮಪುರ, ಐಮಂಗಲ, ಜೆ.ಜೆ.ಹಳ್ಳಿ ಹಾಗೂ ಕಸಬಾ ಹೋಬಳಿಗಳ ನಿವಾಸಿಗಳು ವಿವಿ ಸಾಗರದಿಂದ ಕುಡಿಯುವ ನೀರು ನೀಡುವಂತೆ ಹಾಗೂ ಕುಂದಲಗುರ ಬ್ಯಾರೇಜ್‌ಗಳಿಗೂ ನೀರು ಹರಿಸುವಂತೆ ರೈತರು ಹತ್ತಾರು ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದಾರೆ.

ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳ ವೇದಾವತಿ ನದಿ ಪಾತ್ರದ ರೈತರಿಗೆ ವೇದಾವತಿ ನದಿಯಲ್ಲಿ ನೀರು ಹರಿಸ ಬೇಕಾಗಿದೆ. ವಾಣಿವಿಲಾಸ ಜಲಾಶಯ ನಂಬಿ 25 ಸಾವಿರ ಹೆ.ಪ್ರದೇಶದಲ್ಲಿ ರೈತರು ತೆಂಗು, ಒಣ ಬೇಸಾಯ, ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದು, ಈ ಎಲ್ಲ ಬೇಡಿಕೆಗಳಿಗೆ ಕನಿಷ್ಠ 10 ಟಿಎಂಸಿ ಅಡಿ ನೀರು ಅಗತ್ಯವಿದೆ. ಈ ನಿಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳಬೇಕು.

ಅಜ್ಜಂಪುರ ಸಮೀಪದ ರೈಲ್ವೆ ಕೆಳ ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ರೈಲ್ವೆ ಅಧಿಕಾರಿಗಳಿಗೆ ಸೂಚಿಸಬೇಕು. ಈ ಶೀಘ್ರ ಕಾಮಗಾರಿ ಪೂರ್ಣಗೊಂಡರೆ ಜೂನ್‌ನಿಂದ ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಸಲು ಅನುಕೂಲವಾಗಲಿದೆ. ಆದ್ದರಿಂದ ತಾವುಗಳು ಈ ನಿಟ್ಟಿನಲ್ಲಿ ತುರ್ತು ಗಮನ ಹರಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net