ಅಪಾಯಕ್ಕೆ ಕಾದಿವೆ ವಿದ್ಯುತ್ ಪರಿವರ್ತಕಗಳು

BESCOM
Published on

ಶ್ರೀಕಾಂತ್ ಕುರುವತ್ತಿ ಚಿತ್ರದುರ್ಗ: ಉದ್ಯಾನವನದ ಸುತ್ತಲೂ ಜೋತು ಬಿದ್ದ ವಿದ್ಯುತ್ ತಂತಿಗಳು. ಯಾಮಾರಿ ಕೈ ಕಾಲು ಬಡಿಸಿದರೆ ಪರಲೋಕ ಸೇರುವಷ್ಟು ಅಪಾಯ ಆಹ್ವಾನಿಸುವ ವಿದ್ಯುತ್ ಪರಿವರ್ತಕಗಳು. ಮಕ್ಕಳ ಕೈಗೆಟುಕುವಷ್ಟು ಕೆಳಮಟ್ಟದಲ್ಲಿ ಅಳವಡಿಸಿರುವ ಬೀದಿ ದೀಪಗಳ ಸ್ವಿಚ್‌ಗಳು, ತೆರೆದುಕೊಂಡಿರುವ ಫ್ಯೂಸ್ ಬಾಕ್ಸ್‌ಗಳು, ಗಿಡ ಮರಗಳಿಗೆ ತಾಗಿರುವ ವೈರ್‌ಗಳು... ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಸಮಸ್ಯೆಗಳ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.

ಈ ಸಮಸ್ಯೆ ಎಲ್ಲಿವೆ... ಬೆಸ್ಕಾಂ ಅಧಿಕಾರಿಗಳಲ್ಲಿ ಇಷ್ಟೊಂದು ನಿರ್ಲಕ್ಷೃವೆ? ಸಾರ್ವಜನಿಕರ ಸುರಕ್ಷತೆಗೆ ಯಾವ ಕ್ರಮವೂ ಕೈಗೊಂಡಿಲ್ಲವ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಾಗ ಕಂಡ ದೃಶ್ಯಗಳಿವು.

ಬೇಸಿಗೆ ಸಮೀಪಿಸುತ್ತಿದೆ. ಗಿಡ ಮರಗಳು ಎಲೆ ಉದುರಿಸಿ ವಸಂತಾಗಮನಕ್ಕೆ ಸಜ್ಜಾಗುತ್ತಿವೆ. ರಾಶಿ ರಾಶಿಯಾಗಿ ಬೀಳುವ ತರಗೆಲೆಗಳು ಬೇಸಿಗೆಯಲ್ಲಿ ಬಲು ಅಪಾಯಕಾರಿ. ಅದರಲ್ಲೂ ವಿದ್ಯುತ್ ಪರಿವರ್ತಕಗಳ ಕೆಳಗಡೆ ಗಿಡ ಮರ ಇದ್ದರಂತೂ ದೇವರೇ ಕಾಪಾಡಬೇಕು. ಪರಿಸ್ಥಿತಿ ಹೀಗಿದ್ದರೂ ಬೆಸ್ಕಾಂ ಮಾತ್ರ ಯಾವುದೇ ಮುನ್ನೆಚ್ಚರಿಕೆ ಕೈಗೊಂಡಿಲ್ಲ.

ಕೈಗೆಟುಕುತ್ತವೆ ವಿದ್ಯುತ್ ಪರಿವರ್ತಕ: ನಗರದ ದವಳಗಿರಿ ಬಡಾವಣೆ 2ನೇ ಹಂತದ ಪಾರ್ಕ್‌ಗೆ ಹೊಂದಿಕೊಂಡಂತೆ ನಾಲ್ಕು, ಇದೇ ಪ್ರದೇಶದ ಇತರ ಓಣಿಗಳಲ್ಲಿ ಐದಾರು ವಿದ್ಯುತ್ ಪರಿವರ್ತಕಗಳಿವೆ. ಇವು ನೆಲ ಮಟ್ಟದಲ್ಲೇ ಇದ್ದರಿಂದ ಯಾವಾಗಬೇಕಾದರೂ ಅಪಾಯ ಸಂಭವಿಸಬಹುದಾಗಿದೆ. ಬಹುತೇಕ ಪರಿವರ್ತಕಗಳ ಕೆಳ ಭಾಗದಲ್ಲಿ ಅಳವಡಿಸಿರುವ ಪ್ಯೂಸ್ ಬಾಕ್ಸ್ ತೆರೆದುಕೊಂಡಿವೆ. ವಿದ್ಯುತ್ ತಂತಿಗಳು ಪಾರ್ಕ್‌ನ ಗಿಡ ಮರಗಳಲ್ಲಿ ಮುಚ್ಚಿ ಹೋಗಿವೆ. ಈ ತೊಂದರೆ ಬರಿ ದವಳಗಿರಿ ಬಡಾವಣೆಗೆ ಸೀಮಿತವಲ್ಲ ಇಡೀ ನಗರಕ್ಕೆ ವ್ಯಾಪಿಸಿದೆ.

ಅಪಾಯಕಾರಿ ಸ್ಥಳಗಳು: ಬುರುಜನಹಟ್ಟಿ, ಬಿವಿಕೆಎಸ್ ಬಡಾವಣೆ, ನೆಹರು ನಗರದಂತಹ ಜನ ವಸತಿ ಪ್ರದೇಶಗಳಲ್ಲಿ ಮನೆ ಎದುರೇ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಸಾಲದೆಂಬಂತೆ ಅಲ್ಲಿನ ನಿವಾಸಿಗಳು ಇದೇ ಕಂಬಗಳಿಗೆ ತಂತಿಕಟ್ಟಿಕೊಂಡು ಬಟ್ಟೆ ಒಣಗಿ ಹಾಕುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ವಿದ್ಯುತ್ ಕಂಬಗಳಿಗೆ ದನ ಕುರಿಗಳನ್ನೂ ಕಟ್ಟಲಾಗುತ್ತಿದೆ. ಇನ್ನು ನಗರದ ಬಹುತೇಕ ಮನೆಗಳ ಮುಂಭಾಗ ಹಾದು ಹೋಗಿರುವ ವಿದ್ಯುತ್ ತಂತಿಗಳು ಸ್ವಲ್ಪ ಅಲ್ಲಾಡಿದರೆ ಮೈ ಕೈಗೆ ತಾಗುವಂತಿವೆ. ಲಕ್ಷ್ಮೀ ಬಜಾರ್‌ನಲ್ಲಿ ಬಹುತೇಕ ಕಡೆ ಟ್ರಾನ್ಸ್‌ಫಾರ್ಮ್‌ಗಳಿಗೆ ತಾಗಿಸಿಕೊಂಡು ಚಪ್ಪಲಿ, ಜ್ಯುವೇಲರಿ ಇನ್ನಿತರ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಕುತ್ತು ತರಬಹುದು: ನೀಲಕಂಠೇಶ್ವರ ದೇವಸ್ಥಾನ ಸಮೀಪ ಹಾಗೂ ಇದಕ್ಕೆ ಹೊಂದಿಕೊಂಡ ಸುತ್ತಮುತ್ತಲಿನ ಪ್ರದೇಶವಲ್ಲದೆ ನಗರದ ಬಹುತೇಕ ಕಡೆಗಳಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳ ಸುತ್ತ ತಂತಿ ಬೇಲಿ ವ್ಯವಸ್ಥೆ ಮಾಡಿಲ್ಲ. ಈ ಕಂಬಗಳ ಮಧ್ಯ ಭಾಗದಲ್ಲಿ ಕಸ ಹಾಕಲಾಗುತ್ತಿದೆ. ಈ ತ್ಯಾಜ್ಯ ತಿನ್ನಲು ಬರುವ ಜಾನುವಾರುಗಳು ಸ್ವಲ್ಪ ಮೈ ಅಲ್ಲಾಡಿಸಿದರೆ ವಿದ್ಯುತ್ ಅವಘಡಕ್ಕೆ ಬಲಿ ಖಚಿತ.

ನಿಮಗಿದು ತಿಳಿದಿರಲಿ: ವಿದ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಿ ಹಾಕುವುದು, ಬಟ್ಟೆಗಳನ್ನು ಒಣಗಿ ಹಾಕುವುದು, ಇವುಗಳ ಕೆಳಗಡೆ ತ್ಯಾಜ್ಯ ಸಂಗ್ರಹಿಸುವುದು, ವಿದ್ಯುತ್ ಲೈನ್‌ಗಳಿಗೆ ಹೊಂದಿಕೊಂಡು ಮನೆ ಇತ್ಯಾದಿ ಕಟ್ಟಡ ಕಟ್ಟುವುದು ಅಪಾಯಕಾರಿ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಈ ಕುರಿತು ಬೆಸ್ಕಾಂ ಜಾಗೃತಿ ಮೂಡಿಸುವುದು ಅತ್ಯಗತ್ಯ.

ಹೀಗಿರಲಿ ವಿದ್ಯುತ್ ವ್ಯವಸ್ಥೆ: ಜನ ವಸತಿ ಪ್ರದೇಶಗಳಲ್ಲಿರುವ ವಿದ್ಯುತ್ ಪರಿವರ್ತಕಗಳ ಸುತ್ತಲೂ ತಂತಿ ಬೇಲಿ ಅಳವಡಿಸಬೇಕು. ಇಲ್ಲಿ ಕಸ ಹಾಕದಂತೆ ಕ್ರಮ ಕೈಗೊಳ್ಳಬೇಕು. ಬೀದಿ ದೀಪಗಳ ಸ್ವಿಚ್‌ನ ವೈರ್‌ಗಳು ತೆರೆದುಕೊಳ್ಳದಂತೆ ನೋಡಿಕೊಳ್ಳಬೇಕು. ಮಕ್ಕಳ ಕೈಗೆಟುಕುವಂತಿರುವ ಇವುಗಳನ್ನು ಸ್ವಲ್ಪ ಮೇಲ್ಭಾಗದಲ್ಲಿ ಅಳವಡಿಸಬೇಕು. ಗಿಡ ಮರಗಳು ಹಾಗೂ ವಾಸದ ಮನೆಗೆ ತಾಗುವಂತಿರುವ ವಿದ್ಯುತ್ ತಂತಿಗಳಿಗೆ ಪೈಪ್‌ಗಳನ್ನು ಅಳವಡಿಸಬೇಕು.


ಬೆಸ್ಕಾಂ ಎಇಇ ಪ್ರಭಾಕರ್ ಹೆಳಿಕೆ: ವಿದ್ಯುತ್ ಪರಿವರ್ತಕಗಳ ಸುತ್ತ ತಂತಿಬೇಲಿ ಅಳವಡಿಸುವುದು ಅಪಾಯಕಾರಿ ಎಂಬ ಕಾರಣಕ್ಕೆ ಇದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಭೂಸಂಪರ್ಕ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ತೆರೆದುಕೊಂಡಿರುವ ಎಲ್.ಟಿ. ವಿತರಣಾ ಪೆಟ್ಟಿಗೆ ಭದ್ರತೆ, ತಂತಿಗಳಿಗೆ ತಾಗುವ ಮರದ ಟೊಂಗೆಗಳನ್ನು ಕತ್ತರಿಸುವ ಜತೆಗೆ ವಿದ್ಯುತ್ ಅವಘಡ ತಪ್ಪಿಸಲಿಕ್ಕಾಗಿ ಇನ್ನೆರಡ್ಮೂರು ದಿನಗಳಲ್ಲಿ ಪತ್ರಿಕಾ ಪ್ರಕಟಣೆ, ಸಭೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.


ದವಳಗಿರಿ ಬಡಾವಣೆ ನಿವಾಸಿ ಶಾಂತಮ್ಮ ಹೇಳಿಕೆ: ಮನೆ ಎದುರೇ ಇರುವ ವಿದ್ಯುತ್ ಪರಿವರ್ತಕದಿಂದ ಉಂಟಾಗುವ ಬೆಂಕಿ ಕಿಡಿಗಳು ಸದಾ ಭೀತಿ ಹುಟ್ಟಿಸುತ್ತಿವೆ. ರಾತ್ರಿ ಹಗಲೆನ್ನದೆ ಒಮ್ಮೊಮ್ಮೆ ದಿಢೀರ್ ಬೆಂಕಿ ಕಾಣಿಸಿಕೊಳ್ಳುತ್ತದೆ. ಪರಿವರ್ತಕದ ಶಬ್ದ ಆತಂಕ ಉಂಟು ಮಾಡುತ್ತದೆ. ಬೆಸ್ಕಾಂ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net