

ಚಿತ್ರದುರ್ಗ: ಅಭಿವೃದ್ಧಿಯತ್ತ ದಾಪುಗಾಲಿಟ್ಟಿದ್ದ ಜೋಗಿಮಟ್ಟಿ ಆಡುಮಲ್ಲೇಶ್ವರ ಮೃಗಾಲಯ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಹೀಗಾಗಿ ಇಲ್ಲಿ ಹೊಸದಾಗಿ ನಿರ್ಮಿಸಲುದ್ದೇಶಿಸಿದ್ದ ಪ್ರಾಣಿ,ಪಕ್ಷಿ, ಸರಿಸೃಪಗಳ ಎನ್ ಕ್ಲೋಸರ್‌ಗಳಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.
ಉದ್ದೇಶಿತ 18 ಎನ್‌ಕ್ಲೋಸರ್‌ಗಳ ಪೈಕಿ ಕರಡಿ, ಚಿರತೆ, ಚುಕ್ಕೆ ಜಿಂಕೆ, ಕೃಷ್ಣಮೃಗ ಹಾಗೂ ಝೀಬ್ರಾ ಆವರಣಗಳು ಈಗಾಗಲೇ ನಿರ್ಮಾಣ ಆಗಿವೆ.
ಹುಲಿ ಸೇರಿದಂತೆ ಉಳಿದ ಪ್ರಾಣಿಗಳ ಆವರಣಗಳ ನಿರ್ಮಾಣಕ್ಕೆ ಈ ವರ್ಷ ಅನುದಾನ ಸಿಗುವುದು ಕಷ್ಟವೆಂದು ಅರಣ್ಯಇಲಾಖೆ ಹೆಚ್ಚುವರಿ ಪ್ರಧಾನ ಮುಖ್ಯಅರಣ್ಯಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾಹಿತಿ ನೀಡಿದ್ದಾರೆ.
ಆಡುಮಲ್ಲೇಶ್ವರ ಮೃಗಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಾಣಿ ದತ್ತು ಕಾರ್ಯಕ್ರಮದಡಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಒಂದು ಕರಡಿ ದತ್ತು ಪಡೆದು, ಅದರ ವಾರ್ಷಿಕ ನಿರ್ವಹಣೆಗೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ ಅವರ ಮೂಲಕ ಕಳುಹಿಸಿದ್ದ 98 ಸಾವಿರ ರೂ.ಚೆಕ್‌ನ್ನು ಇದೇ ವೇಳೆ ರವಿ ಸ್ವೀಕರಿಸಿದರು.
ಈಗ ನಿರ್ಮಾಣವಾದ ಹೊಸ ಆವರಣಕ್ಕೆ ಸದ್ಯವೆ ಮೈಸೂರಿನಿಂದ ಮೂರು ಝೀಬ್ರಾಗಳು ಆಡುಮಲ್ಲೇಶ್ವರಕ್ಕೆ ಬರಲಿವೆ. ಪ್ರಗತಿಯಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆ ಹಾಗೂ ಸ್ಟೋರ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದೆಂದರು.
60 ಕೋಟಿ ರೂ.ಅನುದಾನ ಕೊರತೆ: ಕರೊನಾದಿಂದ ರಾಜ್ಯದ 9 ಮೃಗಾಲಯಗಳೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ಪ್ರಾಣಿಗಳ ದತ್ತು ಕಾರ್ಯ ಕ್ರಮಕ್ಕೆ ಒತ್ತು ನೀಡುತ್ತಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಸೋಮಶೇಖರ್, ಅಲ್ಲಿಯ ಮೃಗಾಯಲಯಕ್ಕೆ ಇತ್ತೀಚೆಗೆ 273 ಲಕ್ಷ ರೂ. ಸಂಗ್ರಹಿಸಿ ಕೊಟ್ಟಿದ್ದಾರೆ. ರಾಜ್ಯದ ಮೃಗಾಲಯಗಳ ಅಭಿವೃದ್ಧಿ,ನಿರ್ವಹಣೆಗೆ ಈ ವರ್ಷ 115 ಕೋಟಿ ರೂ.ಅಗತ್ಯವಿದೆ. ಆದರೆ ಈ ವರ್ಷ 60 ಕೋಟಿ ರೂ.ಅನುದಾನದ ಕೊರತೆ ಉಂಟಾಗಲಿದೆ.
ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳನ್ನು ದತ್ತು ಪಡೆಯ ಬೇಕು ಇದಕ್ಕೆ ಆದಾಯ ತೆರಿಗೆ ವಿನಾಯಿತಿ ಇದೆ. ದೊಡ್ಡ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯಡಿ ಮೃಗಾಲಯಗಳ ನಿರ್ವಹಣೆಗೆ ಸಹಕರಿಸುವಂತೆ ಕೋರಿದರು.
ರಾಜ್ಯ ಎಲ್ಲ ಮೃಗಾಲಯಗಳ ಪುನರಾರಂಭಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ತಕ್ಷಣಕ್ಕೆ ವೀಕ್ಷಕರ ಸಂಖ್ಯೆ ಸಹಜ ಸ್ಥಿತಿಗೆ ತಲುಪುವುದು ಕಷ್ಟ. ಆದರೆ ಪ್ರವಾಸಿಗರ ಆರೋಗ್ಯ ರಕ್ಷಣೆಗಾಗಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು, ಮೃಗಾಲಯಗಳನ್ನು ತೆರೆಯಲು ಸರ್ಕಾರ ಶೀಘ್ರ ಅನುಮತಿ ಕೊಡ ಬಹುದೆಂದರು.
ಡಿಸಿಎಫ್ ಚಂದ್ರಶೇಖರ ನಾಯಕ್, ಎಸಿಎಫ್ ರಾಘವೇಂದ್ರ, ವಲಯ ಅರಣ್ಯಾಧಿಕಾರಿ ವಸಂತ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಕೆ.ಎಸ್.ನವೀನ್, ಸಂಸದದ ಆಪ್ತ ಸಹಾಯಕ ಷಣ್ಮುಖ, ಮೋಹನ್, ಕ್ರೈಸ್ ಇಂಜಿನಿಯರ್ ಪ್ರೇಮ್‌ಸಾಗರ್ ಇದ್ದರು.