ಕೃಷಿ ಸಾಲ ಸಂಪೂರ್ಣ ಮನ್ನಾಕ್ಕೆ ಒತ್ತಾಯ

CTD 24 RAITHA SABE
Published on

ಚಿತ್ರದುರ್ಗ: ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲ ಸಂಪೂರ್ಣ ಮನ್ನಾ ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಪ್ರಮುಖರು ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಭೆ ನಡೆಸಿದರು.

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ತ್ವರಿತ ಅನುಷ್ಠಾನಗೊಳಿಸಬೇಕು. ಚಿತ್ರದುರ್ಗ ತಾಲೂಕು ಅನ್ನೆಹಾಳ್, ಹುಲ್ಲೂರು, ಮಾನಂಗಿ, ಸಿದ್ದಾಪುರ, ಕಾಟೇಹಳ್ಳಿ, ಸಾದರಹಳ್ಳಿ, ಕಾತ್ರಾಳ್ ಕೆರೆಗಳ ಕೆರೆಗಳ ಹೂಳೆತ್ತಿಸಿ ನೀರು ತುಂಬಿಸುವಂತೆ ಒತ್ತಾ ಯಿಸಿ ಸಿಎಂಗೆ ಮನವಿ ಸಲ್ಲಿಸಲು ಮುಖಂಡರು ನಿರ್ಧರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಸೋಮುಗುದ್ದು ರಂಗಸ್ವಾಮಿ ಮಾತನಾಡಿ, ರಾಜ್ಯದ ಹಿಂದಿನ ಸರ್ಕಾರ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರ ಹಿಂದೆ ಯಾವುದೇ ರೈತಪರ ಕಾಳಜಿಯಿಲ್ಲ. ಇದು ಕೇವಲ ಕಣ್ಣೋರೆಸುವ ತಂತ್ರವೆಂದು ಆರೋಪಿಸಿದರು.

ಅಡಕೆ, ತೆಂಗು ತೋಟಗಳು ಒಣಗಿದ್ದು, ಬೆಳೆ ನಷ್ಟ, ಬರ ಪರಿಹಾರವನ್ನು ತಕ್ಷಣದಿಂದಲೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಕುರುಬರಹಳ್ಳಿ ಜಿ.ಎಸ್.ಶಿವಣ್ಣ, ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ ಅಳಗವಾಡಿ, ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ, ಎ.ಎಸ್.ಗುರುಸಿದ್ದಪ್ಪ, ಎಸ್.ಕಲ್ಲಪ್ಪ, ಶಾಂತಣ್ಣ, ಎಸ್.ಎಂ.ಶಿವಕುಮಾರ್, ಮುಜೀಬುಲ್ಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net