ಸ್ಪಷ್ಟ ವಿಚಾರಧಾರೆಯ ಮಹಾನ್ ಮೇಧಾವಿ

ctd 6 muruga vedike (1)
Published on

ಚಿತ್ರದುರ್ಗ: ಸತತ ಅಧ್ಯಯನದಿಂದಾಗಿ ತಮ್ಮಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಂಡು ಜಗತ್ತಿಗೆ ಪ್ರಖರ ಮತ್ತು ಸ್ಪಷ್ಟ ವಿಚಾರಧಾರೆಯನ್ನು ಕೊಡಲು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಾಧ್ಯವಾಯಿತು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಮಾನವ ಬಂಧುತ್ವ ವೇದಿಕೆ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಯಂಗವ್ವಕಟ್ಟೆ ಸ್ಮಶಾನದಲ್ಲಿ ಭಾನುವಾರ ಆಯೋಜಿಸಿದ್ದ ಮೌಢ್ಯದ ವಿರುದ್ಧ ಜಾಗೃತಿ ಕಾರ‌್ಯಕ್ರಮ ‘ಪರಿವರ್ತನಾ ದಿನ’ದಲ್ಲಿ ಮಾತನಾಡಿದರು.

ಪ್ರಖರ ವಿಚಾರಧಾರೆಯನ್ನು ಬಳಸಿಕೊಂಡು ತಮ್ಮಲ್ಲಿರುವ ಅಪಾರ ಶಕ್ತಿಯನ್ನು ದಮನಿತರ ಏಳ್ಗೆ ಹಾಗೂ ಜಾಗೃತ ಭಾರತ ನಿರ್ಮಾಣಕ್ಕೆ ಅಂಬೇಡ್ಕರ್ ಮುಂದಾಗಿದ್ದರು ಎಂದರು.

ಅನುಭವಿಸಿದ್ದ ಅನೇಕ ಅವಮಾನಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು, ರಚಿಸಿದ ಸಮಗ್ರ, ವಿಚಾರಗಳಿಂದ ತುಂಬಿರುವ ಸಂವಿಧಾನವಿಂದು ನಮ್ಮ ಸ್ವಾಭಿಮಾನಿ ಭಾರತವನ್ನು ಆಳುತ್ತಿದೆ. ಇದು ರಾಷ್ಟ್ರದ ಧರ್ಮ ಗ್ರಂಥ. ಇದನ್ನು ಪ್ರತಿಯೊಬ್ಬರೂ ಮನೆಯಲ್ಲಿಟ್ಟುಕೊಂಡು ನಿತ್ಯ ಅಧ್ಯಯನ ಮಾಡಬೇಕು. ಶೋಷಿತ ಸಮುದಾಯದವರು ಸಂವಿಧಾನದ ಸವಲತ್ತುಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದುವ ಜತೆಗೆ ಇತರರನ್ನು ಬೆಳೆಸಬೇಕು ಎಂದರು.

ಧರ್ಮದಲ್ಲಿ ಸಂಪ್ರದಾಯಗಳು ಸಹಜ. ಆದರೆ ಗೊಡ್ಡು ಸಂಪ್ರದಾಯಗಳೇ ಧರ್ಮವಾಗಬಾರದು. ಬದುಕಿಗೆ ನಂಬಿಕೆ ಬೇಕು. ಮೂಢ ನಂಬಿಕೆ ಅಲ್ಲ. ಕಂದಾಚಾರಗಳ ಆಚರಣೆ ಸಲ್ಲದು. ಬುದ್ಧ ಮಾನವೀಯತೆ, ಬಸವಣ್ಣ ಸಮಾನತೆ ಹಾಗೂ ಅಂಬೇಡ್ಕರ್ ವೈಚಾರಿಕತೆಯನ್ನು ಬೋಧಿಸಿದರು. ಅಂಬೇಡ್ಕರ್ ಸಹಿತ ಎಲ್ಲ ದಾರ್ಶನಿಕರ ಆದರ್ಶಗಳು ವೈಚಾರಿಕತೆಯ ರೂಢಿಗೆ ಸಹಕಾರಿಯಾಗಿವೆ ಎಂದರು.

ವೇದಿಕೆ ಅಧ್ಯಕ್ಷ ಅಂಜಿನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಮಶಾನದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಕಾರ‌್ಯಕ್ರಮ ನಡೆಯುತ್ತಿದೆ ಎಂದರು.

ಪ್ರೊ.ಲೇಪಾಕ್ಷ ಮಾತನಾಡಿ, ಅನೇಕ ದಾರ್ಶನಿಕರು ಮೌಢ್ಯ ಆಚರಣೆಗಳ ವಿರುದ್ಧ ನಮ್ಮನ್ನು ಎಚ್ಚರಿಸಿದ್ದರೂ ಕಂದಾಚಾರಗಳಿಂದ ನಾವಿನ್ನೂ ಹೊರಬಂದಿಲ್ಲವೆಂದರು.

ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಅಧ್ಯಕ್ಷ ಫಾತ್ಯರಾಜನ್, ಡಿ.ಎನ್.ಮೈಲಾರಪ್ಪ, ಮೀನಾಕ್ಷಮ್ಮ, ಬಿ.ಟಿ.ಜಗದೀಶ್, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ರಘುರಾಂ ರೆಡ್ಡಿ, ಮೋಹನ್, ಪ್ರಕಾಶ್, ಅಜ್ಜಣ್ಣ, ಜಯಣ್ಣ, ರಾಜೇಂದ್ರ ಚಕ್ರವರ್ತಿ, ಟಿಪ್ಪು ಅಲಿ ಖಾಸಿಂ, ಮರುಳಾರಾಧ್ಯ ಮತ್ತಿತರರ ಮುಖಂಡರು ಇದ್ದರು.

ಕಾರ‌್ಯಕ್ರಮದ ಬಳಿಕ ಸ್ಥಳದಲ್ಲೇ ಉಪಹಾರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net