

ಚಿತ್ರದುರ್ಗ: 2019 ರಲ್ಲಿ ಅಸ್ತಿತ್ವಕ್ಕೆ ಬಂದ ನಮ್ಮ ನಿಗಮದ ಅನುದಾನ ಕರೊನಾ ಕಾರಣದಿಂದ ಕಡಿತಗೊಂಡಿದೆ ಎಂದು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಹೇಳಿದರು.
ಪ್ರವಾಸಿ ಮಂದಿರದಲ್ಲಿ ನಿಗಮದಿಂದ ಫಲಾನುಭವಿಗಳಿಗೆ ಸಾಲ ಮಂಜೂರು ಪತ್ರ ವಿತರಿಸಿ ಮಾತನಾಡಿ, ಮೊದಲ ವರ್ಷದಲ್ಲಿ ನಿಗಮಕ್ಕೆ 10 ಕೋಟಿ ರೂ. ಬಿಡುಗಡೆಯಾಗಿತ್ತು. ಆದರೆ, ಈಗ ಶೇ. 50 ಪ್ರಮಾಣದಲ್ಲಿ ಹಿಂಪಡೆದಿದ್ದು, ಪ್ರಸ್ತುತ ವರ್ಷ ಕನಿಷ್ಠ 15 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಇದಕ್ಕೆ ಸಹಮತ ಸೂಚಿಸಿದ್ದಾರೆ. ಲಾಕ್‌ಡೌನ್‌ನಿಂದ ನಮ್ಮ ಸಮುದಾಯವೂ ಸಂಕಷ್ಟಕ್ಕೆ ಸಿಲುಕಿದೆ ಎಂದರು.
1958ರ ನಂತರ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ದೊರೆಯುತ್ತಿರಲಿಲ್ಲ. ಈಗ ನಮೂನೆ ‘ಜಿ’ ಅಡಿ ಜಾತಿ ಹಾಗೂ ಆದಾಯ ಪ್ರಮಾಣ ಒದಗಿಸಲಾಗುತ್ತದೆ. ಒಮ್ಮೆ ಪಡೆದ ಪ್ರಮಾಣ ಪತ್ರದ ವ್ಯಾಲಿಡಿಟಿ ಐದು ವರ್ಷವಿರುತ್ತದೆ. ಸಮುದಾಯದ ಅರ್ಹರಿಗೆ ಶೇ.4 ಬಡ್ಡಿ ದರದಲ್ಲಿ ಗರಿಷ್ಠ ಒಂದು ಲಕ್ಷ ರೂ. ನೇರ ಉದ್ಯೋಗ ಸಾಲ ಮಂಜೂರು ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನೆರವಾಗಲು ಶೇ.2 ಬಡ್ಡಿದರದಲ್ಲಿ ಗರಿಷ್ಠ ಒಂದು ಲಕ್ಷ ರೂ. ಮೊತ್ತದ ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಸ್ವಾವಲಂಬಿ ಹಾಗೂ ಪ್ರಾಮಾಣಿಕರೆಂಬ ಹೆಗ್ಗಳಿಕೆ ನಮ್ಮ ಸಮುದಾಯಕ್ಕೆ ಇದೆ. ಆದ್ದರಿಂದ ಫಲಾನುಭವಿಗಳು ತಪ್ಪದೇ ಸಾಲ ಮರು ಪಾವತಿ ಮಾಡಿ, ಉಳಿದವರೂ ಸಾಲ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಮುಂದಿನ ದಿನಗಳಲ್ಲಿ ಫುಡ್ ಟ್ರಕ್, ಕುಶಲ ತರಬೇತಿ ಇತ್ಯಾದಿ ಯೋಜನೆಗಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ 50 ಜನರಿಗೆ ತಲಾ ಒಂದು ಲಕ್ಷ ರೂ.ಸಾಲ ಮಂಜೂರು ಮಾಡಲಾಗಿದೆ. 11 ಅರ್ಜಿ ಕಾಯ್ದಿರಿಸಲಾಗಿದೆ. ಜೂನ್ 30 ರೊಳಗೆ ಎಲ್ಲ 61 ಜನರಿಗೂ ಸಾಲದ ಮೊತ್ತ ಬಿಡುಗಡೆ ಆಗಲಿದೆ ಎಂದರು.
ರಾಜ್ಯ ಆರ್ಯವೈಶ್ಯ ಮಂಡಳಿ ಜಿಲ್ಲಾಧ್ಯಕ್ಷ ಕಾಶಿ ವಿಶ್ವನಾಥ ಶೆಟ್ಟಿ, ಪ್ರಮುಖರಾದ ಸುರೇಶ್‌ರಾಜ್, ಪಿ.ಡಿ.ಪುಟ್ಟರಾಜು, ನಿಗಮದ ಜಿಲ್ಲಾ ವ್ಯವಸ್ಥಾಪಕ ವಿ.ರಘುನಾಥ್ ಮತ್ತಿತರರು ಇದ್ದರು.