

ಚಿತ್ರದುರ್ಗ: ಆರೋಗ್ಯ ಸಚಿವರು ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡುವ ಬದಲು ಚಿತ್ರದುರ್ಗಕ್ಕೆ ಮಂಜೂರಾದ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲು ಆಸಕ್ತಿ ವಹಿಸುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮನವಿ ಮಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಆಸ್ಪತ್ರೆ ಸರಿಪಡಿಸುವತ್ತ ಸಚಿವ ಶ್ರೀರಾಮುಲು ಗಮನಹರಿಸಬೇಕೇ ಹೊರತು ಆಸ್ಪತ್ರೆಯಲ್ಲಿ ಒಂದು ದಿನ ವಾಸ್ತವ್ಯ ಹೂಡಿ ಹೋದರೆ ಏನೂ ಪ್ರಯೋಜನವಾಗದು ಎಂದು ತಿಳಿಸಿದರು.
2013ರಲ್ಲೇ ಮೆಡಿಕಲ್ ಕಾಲೇಜು ಮಂಜೂರಾದರೂ ಈವರೆಗೂ ವಿಶೇಷ ಅಧಿಕಾರಿ ನೇಮಕವಾಗಿಲ್ಲ. ಅನುದಾನ ಬಿಡುಗಡೆ ಆಗಿಲ್ಲ. ಶಾಸಕರು, ಸಂಸದರು ಸೇರಿ ಜಿಲ್ಲೆಯ ಎಲ್ಲ ಗಣ್ಯರು ಮೆಡಿಕಲ್ ಕಾಲೇಜು ಆರಂಭಿಸಲು ಸರ್ಕಾರದ ಮೇಲೆ ಒತ್ತಡ ತರಲು ಮನವಿ ಮಾಡಿದರು.
ಕಾಲೇಜು ಸ್ಥಾಪನೆ ಸಂಬಂಧ ಸಚಿವರು ಖಚಿತ ಭರವಸೆ ನೀಡದಿದ್ದರೆ ಕೆಡಿಪಿ ಸಭೆಗೆ ಘೇರಾವ್ ಹಾಕುವುದು ಸೇರಿ ವಿವಿಧ ಹಂತದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮೊಳಕಾಲ್ಮೂರು ಶಾಸಕರೂ ಆಗಿರುವ ಸಚಿವರು ಗಣರಾಜ್ಯೋತ್ಸವದಂದು ರಾಯ ಚೂರಿನಲ್ಲಿ ಧ್ವಜಾರೋಹಣ ನೆರವೇರಿಸಲು ನಿರ್ಧರಿಸಿದ್ದು, ಈ ಮೂಲಕ ನಮ್ಮ ಜಿಲ್ಲೆಯ ಜನರನ್ನು ವಂಚಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಮುಖಂಡರಾದ ಮಹಾಂತೇಶ್, ಪ್ರಕಾಶ್ ಕೊಡಗವಳ್ಳಿ, ತಿಪ್ಪೇಸ್ವಾಮಿ, ಚೌಡೇಶ್, ಮಲ್ಲಿಕಾರ್ಜುನ, ದುರುಗೇಶ್, ಓಬಳೇಶ್ ಮೊದಲಾದ ಪ್ರಮುಖರು ಇದ್ದರು.