

ವಿಜಯವಾಣಿ ವಿಶೇಷ ಚಿತ್ರದುರ್ಗ: ನಗರದ ಎಪಿಎಂಸಿ ಪ್ರಸ್ತುತ 20 ತಿಂಗಳ ಅಧಿಕಾರ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜೂ.10ರಂದು ಚುನಾವಣೆ ನಡೆಯಲಿದೆ.
ಜೂ.13ರಂದು 2ನೇ ಅಧಿಕಾರಾವಧಿ ಪೂರ್ಣಗೊಳ್ಳಲಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಹೊಸಬರ ಆಯ್ಕೆಯಾಗಬೇಕಿದ್ದು, ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ನಡುವೆ ಪೈಪೋಟಿ ತೀವ್ರಗೊಂಡಿದೆ.
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಸ್ತುತ ಸಮಿತಿಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಅಂದು ಬೆಳಗ್ಗೆ 10ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ.
ಸಮಿತಿಯ ನಿರ್ದೇಶನ ಬಲ 18. ಇದರಲ್ಲಿ ಮೂವರು ನಾಮ ನಿರ್ದೇಶಕರನ್ನು ಹೊರತು ಪಡಿಸಿ ಪ್ರಸ್ತುತ ಸಮಿತಿಯ 13 ನಿರ್ದೇಶಕ ಸ್ಥಾನಗಳಿಗೆ 2017 ಜ.12ರಂದು ಚುನಾವಣೆ ನಡೆದಿತ್ತು. ಪಕ್ಷ ರಾಜಕಾರಣ ಹೊರತಾದ ಚುನಾವಣೆ ಎಂದಾಗಿದ್ದರೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬೆಂಬಲಿಗರು, ರೈತಸಂಘ ಹಾಗೂ ಪಕ್ಷೇತರರು ಆಯ್ಕೆಯಾಗಿದ್ದರು.
ಬಿರುಸಿನ ಪೈಪೋಟಿ: ತಿಮ್ಮಾರೆಡ್ಡಿ ಮೊದಲ 20 ತಿಂಗಳು, ಡಿ.ಟಿ.ರಾಜೇಂದ್ರರೆಡ್ಡಿ 12 ಹಾಗೂ ಹಾಲಿ ಅಧ್ಯಕ್ಷ ಡಿ.ಎಸ್.ಶಶಿಧರ್ ಕಳೆದ 8 ತಿಂಗಳ ಹಿಂದೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಈಗ ಮೂರ‌್ನಾಲ್ಕು ನಿರ್ದೇಶಕರ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಬಿರುಸಿನ ಪೈಪೋಟಿ ನಡೆದಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮೂವರು ನಾಮ ನಿರ್ದೇಶಕ ಸ್ಥಾನಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ ಇಬ್ಬರನ್ನು ನೇಮಿಸಿ ಆದೇಶಿಸಿದೆ. ಉಳಿದ ಒಬ್ಬರ ಹೆಸರನ್ನು ರಾಜ್ಯ ಸರ್ಕಾರ ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ.
ಸಂಸ್ಕರಣಾ ಘಟಕ-01 (ಸದ್ಯಕ್ಕೆ ಈ ಸ್ಥಾನ ಸಮಿತಿಯಲ್ಲಿ ಇಲ್ಲ)
ಇಲಾಖೆಯಿಂದ ನೇಮಕ-01
ನಾಮ ನಿರ್ದೇಶನ-03 (ಹಾಲಿ ನೇಮಕ-2)
ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರ-01
ವರ್ತಕರ ಕ್ಷೇತ್ರ-01
ಕೃಷಿಕರ ಕ್ಷೇತ್ರ-11 (ಹಾಲಿ 10)
ಸಮಿತಿ ನಿರ್ದೇಶಕರ ವಿವರ
20 ತಿಂಗಳ ಅಧಿಕಾರಾವಧಿಯ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜೂನ್ 10ರಂದು ಚುನಾವಣೆ ನಡೆಯಲಿದೆ. ತಹಸೀಲ್ದಾರ್ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದಾರೆ. ಖಾಲಿ ಉಳಿದಿರುವ ಒಂದು ನಾಮ ನಿರ್ದೇಶಕರ ಸ್ಥಾನಕ್ಕೆ ರಾಜ್ಯ ಸರ್ಕಾರ ಚುನಾವಣೆಯೊಳಗೆ ನೇಮಿಸಬಹುದು.
ಟಿ.ಎ.ಮಹೇಶ್
ಕಾರ್ಯದರ್ಶಿ, ಎಪಿಎಂಸಿ, ಚಿತ್ರದುರ್ಗ