

ಚಿತ್ರದುರ್ಗ: ಚಳ್ಳಕೆರೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ವಲಸೆ ಕಾರ್ಮಿಕರ ಪೈಕಿ ಮತ್ತೆ ಆರು ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿರುವುದು ಜಿಲ್ಲೆ ಜನರ ಆತಂಕಕ್ಕೆ ಕಾರಣವಾಗಿದೆ.
ಚೆನ್ನೈನಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ 58 ಜನರನ್ನು ಮೇ 15ರಂದು ಚಳ್ಳಕೆರೆ ಗಡಿ ನಾಗಪ್ಪನಹಳ್ಳಿ ಗೇಟ್ ಚೆಕ್‌ಪೋಸ್ಟ್‌ನಲ್ಲಿ ತಡೆದು ಕ್ವಾರಂಟೈನ್ ಮಾಡಲಾಗಿತ್ತು.
ಇವರನ್ನು ಕರೆದೊಯ್ಯುತ್ತಿದ್ದ ಚಾಲಕನಿಗೆ ಮೇ 22ರಂದು ಹಾಗೂ ಇದೇ ಗುಂಪಿನ 20 ಜನರಲ್ಲಿ ಮೇ 26ರಂದು ಸೋಂಕಿರುವುದು ದೃಢಪಟ್ಟಿತ್ತು. ಈಗ ಮತ್ತೆ ಆರು ಮಂದಿ ಪುರುಷಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
ಪಿ-2452-15 ವರ್ಷ. ಪಿ-2453-36. ಪಿ-2454-26. ಪಿ-2456-21. ಪಿ-2456-24 ಹಾಗೂ ಪಿ-2457-25 ವರ್ಷ ಯುವಕನಲ್ಲಿ ಸೋಕು ಕಂಡು ಬಂದಿದ್ದು, ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿದೆ. ಇವರಲ್ಲಿ ಐವರು ಚೇತರಿಸಿ ಕೊಂಡಿದ್ದಾರೆ.
ನೋಡೆಲ್ ಅಧಿಕಾರಿಗೆ ಮಾಹಿತಿ: ಹೊರ ರಾಜ್ಯಗಳ ವಲಸೆ ಕಾರ್ಮಿಕರ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಉತ್ತರ ಪ್ರದೇಶದ ನೋಡೆಲ್ ಅಧಿಕಾರಿಗೆ ಚಳ್ಳಕೆರೆಯಲ್ಲಿರುವ ಕಾರ್ಮಿಕರ ಮಾಹಿತಿಯನ್ನು ರವಾನಿಸಿ, ಅವರನ್ನು ಸ್ವ ರಾಜ್ಯಕ್ಕೆ ಕಳಿಸಲು ವ್ಯವಸ್ಥೆ ಕಲ್ಪಿಸುವಂತೆ ಕೋರಲಾಗಿದೆ ಎಂದು ಡಿಸಿ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರತ್ಯೇಕ ಚಿಕಿತ್ಸೆ: ಪಾಸಿಟಿವ್ ಕಾಣಿಸಿರುವ ವಲಸೆ ಕಾರ್ಮಿಕರೆಲ್ಲರ ಆರೋಗ್ಯ ಸ್ಥಿರವಾಗಿದೆ. ಬಿಸಿಎಂ ಹಾಸ್ಟೆಲ್ ಕೋವಿಡ್ ಕೇರ್ ಸೆಂಟರ್‌ನಲ್ಲೇ ವೈದ್ಯಕೀಯ ಸೌಲಭ್ಯದೊಂದಿಗೆ ಇವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದಂಥ ಪ್ರಾಥಮಿಕ ಮತ್ತು ದ್ವಿತೀಯ ಹಂತದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.
58 ಜನರ ಪ್ರಾಣ ಉಳಿಸಿತೇ ಆ ಒಂದು ಟ್ವಿಟ್?: ಚೆನ್ನೈನಿಂದ ಯುಪಿಗೆ ತೆರಳುತ್ತಿದ್ದ 58 ಜನ ಕಾರ್ಮಿಕರ ಪ್ರಾಣವನ್ನು ಉಳಿಸಿತೆ ಆ ಒಂದು ಟ್ವಿಟ್? ಯಾವುದೇ ಪೂರ್ವಾನುಮತಿ ಇಲ್ಲದೆ ಈಚರ್ ವಾಹನದಲ್ಲಿ ಊಟ, ನೀರು, ಗಾಳಿ, ಬೆಳಕಿಲ್ಲದೆ ಕಾರ್ಮಿಕರು ಇನ್ನಿಲ್ಲದ ಸಂಕಟದೊಂದಿಗೆ ಊರು ಸೇರಲು ಬಯಸಿದ್ದರು. ಆದರೆ, ಅವರೆಲ್ಲರೂ ತಮ್ಮ ರಾಜ್ಯ ಸೇರುವುದರೊಳಗೆ, ಯಾರ ಪರಿಸ್ಥಿತಿ ಏನಾಗುತ್ತಿತ್ತೋ ಯಾರಿಗೂ ಗೊತ್ತಿಲ್ಲ.
ಹಸಿವು, ಬಾಯಾರಿಕೆಯಿಂದ ಗಾಳಿಯೇ ಆಡದ ವಾಹನದಲ್ಲಿ ಒಬ್ಬರ ಮೇಲೊಬ್ಬರು ಒಳಗೆ ಕುಳಿತಿದ್ದ ವಿಡಿಯೊವನ್ನು ಅದರಲ್ಲಿದ್ದ ಕಾರ್ಮಿಕನೊಬ್ಬ ತನ್ನ ಸಂಬಂಧಿಗೆ ಕಳುಹಿಸಿದ್ದ. ಅದನ್ನು ನೋಡಿದ್ದ ಕಾರ್ಮಿಕನ ಸಂಬಂಧಿ ವಿಡಿಯೋ ಸಹಿತ ಸಮೇತ ಟ್ವಿಟ್ ಮಾಡಿದ್ದ. ಈ ಕುರಿತು ತಮಗೆ ಬಂದ ಮಾಹಿತಿಯಂತೆ ಪೊಲೀಸರು ಚೆಕ್‌ಪೋಸ್ಟ್‌ನಲ್ಲಿ ತಡೆದು ಕ್ವಾರಂಟೈನ್‌ಗೆ ಒಳಪಡಿಸಿದ್ದರು. ಇಲ್ಲವಾದಲ್ಲಿ ಹಲವರ ಪ್ರಾಣಕ್ಕೆ ಅಪಾಯ ಎದುರಾಗುತ್ತಿತ್ತು ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಜಿಲ್ಲಾಡಳಿತ ದೃಢೀಕರಿಸಬೇಕು: ಪಾಸಿಟಿವ್ ಕಂಡು ಬಂದಿರುವ ವಲಸೆ ಕಾರ್ಮಿಕರು ಪೂರ್ಣವಾಗಿ ಚೇತರಿಸಿಕೊಂಡ ಬಳಿಕವೇ ಅವರನ್ನು ಉತ್ತರ ಪ್ರದೇಶಕ್ಕೆ ಕಳಿಸಲು ಸಾಧ್ಯವಾಗಲಿದೆ. ಅಲ್ಲಿಯವರೆಗೆ ಈಗಿರುವ ಸ್ಥಳದಲ್ಲೇ ಚಿಕಿತ್ಸೆ ಮುಂದುವರಿಯಲಿದೆ. ಇನ್ನು ನೆಗೆಟಿವ್ ಬಂದಿರುವಂಥ ಕಾರ್ಮಿಕರನ್ನು ಸಾಂಸ್ಥಿಕ ಕ್ವಾ ರಂಟೈನ್ ನಿಯಮಗಳು ಪೂರ್ಣಗೊಂಡ ನಂತರದಲ್ಲಿ ಅವರ ರಾಜ್ಯಕ್ಕೆ ಕಳಿಸಲಾಗುವುದು..
ತುಷಾರ ಗಿರಿನಾಥ್
ಹಿರಿಯ ಐಎಎಸ್ ಅಧಿಕಾರಿ, ಬೆಂಗಳೂರು