

ಚಿತ್ರದುರ್ಗ: ರೈತರ ಆರ್ಥಿಕಾಭಿವೃದ್ಧಿಗೆ ಸಾವಯವ ಕೃಷಿ ಪದ್ಧತಿ ನೆರವು ನೀಡಲಿದೆ ಎಂದು ಅಮೃತ್ ಆರ್ಗ್ಯಾನಿಕ್ ಫರ್ಟಿಲೈಜರ್ಸ್ ಸಂಸ್ಥೆ ಮಾಲೀಕ ಕೆ.ನಾಗರಾಜ್ ಹೇಳಿದರು.
ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ರೈತ ಉತ್ಪಾದಕರ ರಚನಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಋಣಾತ್ಮಕ ಅಂಶಗಳಿರುವ ಹಳೇ ಪದ್ಧತಿಯಿಂದ ರೈತರಿನ್ನೂ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿಲ್ಲ ಎಂದರು.
ಕೃಷಿ ಕ್ಷೇತ್ರದಲ್ಲಾದ ಆಧುನಿಕ ಕ್ರಮಗಳನ್ನು ಅರಿಯಬೇಕು. ಸಾವಯವ ಗೊಬ್ಬರ, ಆಧುನಿಕ ಕೃಷಿ, ಮಳೆ ನೀರು ಕೊಯ್ಲು, ಪೂರಕ ಗೊಬ್ಬರ, ನೀರು ಕೊಡುವ ಪದ್ಧತಿ ಇತ್ಯಾದಿ ತಿಳಿದು ಲಾಭ ಕಾಣಬೇಕು ಎಂದು ತಿಳಿಸಿದರು.
ರೈತ ಉತ್ಪಾದಕ ಮತ್ತು ಮಾರಾಟಗಾರರ ಸಂಘಗಳ ಮುಖ್ಯಸ್ಥ ನವೀನ, ಕೃಷಿಯ ಆವಿಷ್ಕಾರ ಮತ್ತು ಬದಲಾವಣೆ ಮಾಹಿತಿ ಸಂಸ್ಥೆಯ ಅಭಿಲಾಷ್, ರೈತ ಉತ್ಪಾದಕ ಸ್ಪಂದನ ಸಂಸ್ಥೆಯ ಸಂಯೋಜಕ ಎಸ್.ಬಿ.ರಾಮಚಂದ್ರಪ್ಪ, ನಿರ್ದೇಶಕ ಈಶ್ವರಪ್ಪ, ಉಪನ್ಯಾಸಕ ಪ್ರಕಾಶ್, ಬೈರೇಶ್ ತರಬೇತಿ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸಿದ್ದರು.