ವೇತನ ಹೆಚ್ಚಿಸದೆ ಸರ್ಕಾರ ಕಡೆಗಣಿಸಿದೆ

Ambulence
Published on

ಚಿತ್ರದುರ್ಗ: ಹೊರ ರಾಜ್ಯಗಳ ಮಾದರಿ ನಮ್ಮಗಳ ವೇತನವನ್ನು ಹೆಚ್ಚಿಸುವಂತೆ 108 ಆಂಬುಲೆನ್ಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಮಂಜುನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

2008 ನ.1ರಂದು ಆರಂಭವಾದ ಆರೋಗ್ಯ ಕವಚ ಸೇವೆಯಲ್ಲಿ 3500 ಸಿಬ್ಬಂದಿ ಇದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯದಲ್ಲಿ 108 ಅಂಬುಲೆನ್ಸ್ ಚಾಲಕರಿಗೆ 10,500 ರೂ. ಹಾಗೂ ನರ್ಸ್‌ಗೆ 1500 ರೂ. ವೇತನ ನಿಡಲಾಗುತ್ತಿದೆ. ಆದರೆ, ಹೊರ ರಾಜ್ಯಗಳಲ್ಲಿ ಈ ನೌಕರರಿಗೆ 27-28 ಸಾವಿರ ರೂ. ವೇತನವಿದೆ.

ಯೋಜನೆ ಆರಂಭದಿಂದ ಪ್ರತಿ ವರ್ಷ ಶೇ.15 ವೇತನ ಹೆಚ್ಚಳವಾಗಿತ್ತು. ಆದರೆ, ಕಳೆದ ನಾಲ್ಕು ವರ್ಷಗಳಿಂದ ವೇತನದಲ್ಲಿ ಹೆಚ್ಚಳವಾಗಿಲ್ಲ. ಆರೋಗ್ಯ ಇಲಾಖೆ ವೈದ್ಯಕೀಯ ಸಿಬ್ಬಂದಿ ವೇತನದಲ್ಲಿ ಹೆಚ್ಚಳವಾದರೂ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಅಳಲು ತೋಡಿಕೊಂಡರು.

ಆರೋಗ್ಯ ಸಚಿವರು 2020 ಜ.1ರಂದು ಅಧಿಕಾರಿಗಳ ಜತೆ ಸಭೆ ನಡೆಸಿ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರ ಭರವಸೆ ಈವರೆಗೆ ಈಡೇರಿಲ್ಲ. ಜೀವನ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿರುವ ನಮ್ಮ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸ ಬೇಕೆಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ಜಿ.ಪಿ.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಕರಿಯಪ್ಪ, ಖಜಾಂಚಿ ಪ್ರದೀಪ್ ಕುಮಾರ್, ಶ್ರೀಧರ್, ಹುಸೇನ್‌ಪೀರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net