ಅಗತ್ಯ ಬಸ್ ವ್ಯವಸ್ಥೆಗೆ ಸೂಚನೆ

SURESHKUKMAR download
Published on

ಚಿತ್ರದುರ್ಗ: ವಿದ್ಯಾರ್ಥಿಗಳಿಗೆ ಸಾರಿಗೆ ಸೌಕರ್ಯ ಒದಗಿಸಲು ಅಗತ್ಯತೆ ಆಧರಿಸಿ ಆಯಾ ಡಿಡಿಪಿಐಗಳು ಖಾಸಗಿ ಶಾಲೆ ಬಸ್‌ಗಳನ್ನು ಬಳಸಿಕೊಳ್ಳಲು ಅಧಿಕಾರ ನೀಡಲಾಗಿದೆ. ಪರೀಕ್ಷಾ ಮಂಡಳಿಯೇ ಇಂಧನ ವೆಚ್ಚ ಭರಿಸಲಿದೆ.ಸಾರಿಗೆ ಸಂಪರ್ಕಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭಿಸಲು ಸಚಿವ ಸುರೇಶ್‌ಕುಮಾರ್ ಸೂಚಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಪರೀಶಿಲಿಸಿದ ಬಳಿಕ ಮಾತನಾಡಿ, ಕಂಟೈನ್‌ಮೆಂಟ್ ಜೋನ್‌ನಲ್ಲಿ ಯಾವುದೇ ಪರೀಕ್ಷಾ ಕೇಂದ್ರ ಇದ್ದಲ್ಲಿ ಪರೀಕ್ಷಾ ಕೇಂದ್ರವನ್ನು ಸ್ಥಳಾಂತರಿಸಿ ಬೇರೆಡೆ ಪರೀಕ್ಷಾ ಕೇಂದ್ರ ಗುರುತಿಸಬೇಕು. ಒಂದು ವೇಳೆ ಪರೀಕ್ಷೆ ಪ್ರಾರಂಭವಾದ ಬಳಿಕ ಹೊಸದಾಗಿ ಕಂಟೈನ್‌ಮೆಂಟ್ ಜೋನ್ ಎಂದು ಘೋಷಿತವಾದರೆ ಅಲ್ಲಿಯ ಎಲ್ಲ ವಿದ್ಯಾರ್ಥಿಗಳಿಗೂ ಜುಲೈನಲ್ಲಿ ನಡೆಸುವ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಆ ವಿದ್ಯಾರ್ಥಿಗಳನ್ನು ಹೊಸಬರು ಎಂದೇ ಪರಿಗಣಿಸಿ,ಅಂಕಪಟ್ಟಿ ಸೇರಿದಂತೆ ಶೈಕ್ಷಣಿಕ ದಾಖಲೆಗಳನ್ನು ಒದಗಿಸಲಾಗುವುದು ಎಂದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ,ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ಬಸ್‌ಗಳನ್ನೇ ಅವಲಂಬಿಸುವುದು ಬೇಡ, ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ,ಯಾವುದೇ ವಿದ್ಯಾರ್ಥಿಗೂ ಬಸ್ ತೊಂದರೆಯಾಗದಂತೆ ಸಿದ್ಧತೆ ಮಾಡಿಕೊಳ್ಳಬೇಕೆಂದರು. ಚಿತ್ರದುರ್ಗ ಡಿಡಿಪಿಐ ಕೆ.ರವಿಶಂಕರ ರೆಡ್ಡಿ,ದಾವಣಗೆರೆ ಡಿಡಿಪಿಐ ಸಿ.ಪರಮೇಶ್ವರಪ್ಪ,ದಾವಣಗೆರೆ ಜಿಪಂ ಸಿಇಓ ಪದ್ಮಾಬಸವಂತಪ್ಪ, ಚಿತ್ರದುರ್ಗ ಸಿಟಿಇ ಪ್ರಾಂಶುಪಾಲ ರುದ್ರಪ್ಪ, ಡಯಟ್ ಪ್ರಾಂಶುಪಾಲ ಎಸ್‌ಕೆಬಿ ಪ್ರಸಾದ್, ದಾವಣಗೆರೆ ಡಯಟ್ ಪ್ರಾಂಶುಪಾಲ ಲಿಂಗರಾಜು ಅವಳಿ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳಿದ್ದರು.

ಪರೀಕ್ಷಾ ಕೇಂದ್ರಗಳು: ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ 22615 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 87 ಮುಖ್ಯಪರೀಕ್ಷಾ ಕೇಂದ್ರಗಳು ಹಾಗೂ 12 ಉಪ ಕೇಂದ್ರಗಳಿವೆ. ದಾವಣಗೆರೆ ಜಿಲ್ಲೆಯಲ್ಲಿ 20927 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದಕ್ಕಾಗಿ 79 ಪರೀಕ್ಷಾ ಕೇಂದ್ರಗಳು ಹಾಗೂ 14 ಉಪ ಕೇಂದ್ರಗಳಿವೆ. ದಾವಣಗೆರೆ ಜಿಲ್ಲೆಯಲ್ಲಿ 15 ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಜಾಲಿನಗರದ ಒಂದು ಪರೀಕ್ಷಾ ಕೇಂದ್ರವನ್ನು ಬೇರೆಡೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net