

ವಿಜಯವಾಣಿ ವಿಶೇಷ ಚಿತ್ರದುರ್ಗ: ಸತತ ಏಳೆಂಟು ವರ್ಷಗಳ ಸತತ ಬರದ ಬಳಿಕ ಕಳೆದ ನವೆಂಬರ್ ವೇಳೆ ಆದ ಮಳೆಯಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಕುಡಿವ ನೀರಿಗೆ ತೊಂದರೆ ಅಷ್ಟಾಗಿ ಕಂಡು ಬಂದಿರಲಿಲ್ಲ. ಆದರೆ, ಈಗ ಬೇಸಿಗೆ ಆರಂಭವಾಗಿದ್ದು, ಜಿಲ್ಲೆಯ ನಾನಾ ಗ್ರಾಮಗಳಲ್ಲಿ ನೀರಿಗಾಗಿ ಕೂಗು ಕೇಳಿಬರುತ್ತಿದೆ.
ಏತನ್ಮಧ್ಯೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತಾಲಯದ ಹಿರಿಯ ಅಧಿಕಾರಿಗಳು ಎಲ್ಲ ಜಿಲ್ಲೆಗಳ ಜಿಪಂ ಸಿಇಒ, ಎಸ್‌ಇ ಮೊದಲಾದ ಅಧಿಕಾರಿಗಳೊಂದಿಗೆ ಡಿಸಿ ಮೂಲಕ ಸಮಾಲೋಚನೆ ನಡೆಸಿ, ಜಿಲ್ಲೆಯಲ್ಲಿ ನೀರಿನ ಲಭ್ಯತೆ, ಶುದ್ಧ ಕುಡಿವ ನೀರಿನ ಘಟಕಗಳ ವಿವರ, ಅವುಗಳ ದುರಸ್ತಿ ಮಾಹಿತಿ ಪಡೆದಿದ್ದಾರೆ.
ಯಾವುದೇ ಗ್ರಾಮದಲ್ಲಿ ನೀರಿನ ತೊಂದರೆ ಕಾಣಿಸಿದರೂ ಕೂಡಲೇ ಕೊಳವೆಬಾವಿ ಕೊರೆಸಬೇಕು ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಪ್ರಗತಿಯಲ್ಲಿರುವ ನೀರು ಪೂರೈಕೆ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ನೀರಿನ ತೊಂದರೆ ಇಲ್ಲ ಎಂಬ ಉದಾಸೀನ ಬೇಡವೆಂದು ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ಜಿಲ್ಲೆಯಲ್ಲಿ 2019-20ನೇ ಸಾಲಿಗೆ ಮಂಜೂರಾಗಿದ್ದ 245.75 ಕೋಟಿ ರೂ. ಕ್ರಿಯಾ ಯೋಜನೆ ಮೀರಿ 377.54 ಕೋಟಿ ರೂ. ವೆಚ್ಚದ ಕುಡಿವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕ್ರಿಯಾಯೋಜನೆ ಇಲ್ಲದೆ ಕೊರೆದಿದ್ದ ಕೊಳವೆ ಬಾವಿಗಳಿಗೂ ಇತ್ತೀಚೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಸರ್ಕಾರ ಒಪ್ಪಿದೆ.
ಆರ್‌ಒ ನಿರ್ವಹಣೆ ಹೊಣೆ ಏಜೆನ್ಸಿಗಳಿಗೆ: ಮಾಸಿಕ ಮೂರು ಸಾವಿರ ರೂ. ಗಳಂತೆ ಜಿಲ್ಲೆಯಲ್ಲಿ ಕೆಆರ್‌ಡಿಎಲ್ ಮತ್ತಿತರ ಅನುದಾನಗಳಿಂದ ನಿರ್ಮಿಸಿದ ಶುದ್ಧ ಕುಡಿವ ನೀರಿನ ಘಟಕಗಳ ಹೊಣೆಯನ್ನು ಮೂರು ಏಜೆನ್ಸಿಗಳಿಗೆ ಪ್ರತ್ಯೇಕವಾಗಿ ವಹಿಸಲಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿದೆ.
ಸಣ್ಣಪುಟ್ಟ ದುರಸ್ತಿ ಇದ್ದರೆ ಏಜೆನ್ಸಿಯವರೇ ಮಾಡಿಸಬೇಕು, ಮೊತ್ತ ಅಧಿಕವಿದ್ದರೆ ಇಲಾಖೆ ಆಯುಕ್ತಾಲಯಕ್ಕೆ ಕೋರಿಕೆ ಸಲ್ಲಿಸಬೇಕಿದೆ. ಜಿಲ್ಲೆಯಲ್ಲಿ 1056 ಶುದ್ಧ ಕುಡಿವ ನೀರಿನ ಘಟಗಳಿದ್ದು, ಇವುಗಳ ಪೈಕಿ 113 ದುರಸ್ತಿಯಾಗಬೇಕಿದೆ. ಸದ್ಯದಲ್ಲೇ ಜಿಲ್ಲೆಯ 197 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು, ಚಳ್ಳಕೆರೆಯಲ್ಲಿ ಅತೀ ಹೆಚ್ಚು ಗ್ರಾಮಗಳಲ್ಲಿ ಕುಡಿವ ನೀರಿನ ತೊಂದರೆ ಉಂಟಾಗಲಿದೆ ಎಂದು ಇಲಾಖೆ ಅಂದಾಜಿಸಿದೆ.
ಶಾಸಕರೇ ಹೇಳಬೇಕೆಂದು ಕಾಯಬೇಡಿ: ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆಗೆ ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಂಪೂರ್ಣ ಕೆಟ್ಟಿರುವ ಆರ್‌ಒಗಳ ದುರಸ್ತಿಗಾಗಿ ಕ್ರಿಯಾ ಯೋಜನೆ ರೂಪಿಸಬೇಕು. ಜಿಪಂ, ತಾಪಂ ಹಾಗೂ ಗ್ರಾಪಂ ಜನಪ್ರತಿನಿಧಿಗಳು ತಿಳಿಸುವ ಕುಡಿವ ನೀರಿನ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಕೊಳವೆಬಾವಿ ಬೇಕೆಂದರೆ ಕೂಡಲೇ ಕೊರೆಸಿ, ಇದಕ್ಕಾಗಿ ಶಾಸಕರು ಹೇಳಬೇಕೆಂದು ಕಾಯಬೇಡಿ ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ತಿಳಿಸಿದ್ದಾರೆ.