ಪ್ರಧಾನಮಂತ್ರಿ ಜನವಿಕಾಸ್ ಯೋಜನೆ ಪಾಠ

CTD 4 NCM VP (1)
Published on

ಚಿತ್ರದುರ್ಗ: ಅಲ್ಪಸಂಖ್ಯಾತರು ಹೆಚ್ಚಿರುವ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಜಾರಿಗೊಳಿಸಲಾದ ಪ್ರಧಾನಮಂತ್ರಿ ಜನವಿಕಾಸ್ ಯೋಜನೆ ಕುರಿತು ಸ್ಥಳೀಯ ಸಂಸ್ಥೆ ಹಾಗೂ ಜಿಲ್ಲಾಡಳಿತಗಳಿಗೇ ಅರಿವಿಲ್ಲ !

ಈ ಬಗ್ಗೆ ತಿಳಿವಳಿಕೆ ಮೂಡಿಸಲು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್ ಖುದ್ದು ಫೀಲ್ಡಿಗೆ ಇಳಿದಿದ್ದು ಸೋಮವಾರ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು.

ಅಂದಾಜು 2000 ಕೋಟಿ ರೂ. ಮೊತ್ತದ ಈ ಯೋಜನೆಯ ಸದ್ಬಳಕೆ ಹಾಗೂ ಪ್ರಧಾನ ಮಂತ್ರಿ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಪ್ರಗತಿ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಪಾಠ ಹೇಳಿದರು.

ದೇಶದ 308 ಜಿಲ್ಲೆಗಳು, ರಾಜ್ಯದ 22 ಜಿಲ್ಲೆಗಳ 28 ನಗರ/ಪಟ್ಟಣ, 6ತಾಲೂಕುಗಳು ಈ ಯೋಜನೆ ಅಡಿ ಆಯ್ಕೆಯಾಗಿದ್ದು ಅಭಿವೃದ್ಧಿಗೆ ಏನೆಲ್ಲ ಕ್ರಮ ಕೈಗೊಳ್ಳಬಹುದೆಂದು ಮಾಹಿತಿ ನೀಡಿದರು.

ಶೇ.25 ರಷ್ಟು ಅಲ್ಪಸಂಖ್ಯಾತರಿರುವ ಪ್ರದೇಶದಲ್ಲಿ ಶೇ.60-40ರ ಅನುಪಾತದಡಿ ಮೂಲಸೌಕರ್ಯ ಅಭಿವೃದ್ಧಿ, ವಸತಿಶಾಲೆ, ಹಾಸ್ಟೆಲ್, ಪಾಲಿಟೆಕ್ನಿಕ್, ಐಟಿಐ, ಕೇಂದ್ರೀಯ, ನವೋದಯ ವಿದ್ಯಾಲಯ ಗಳು, ಆರೋಗ್ಯ, ಸ್ಪಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಇತ್ಯಾದಿಗಳಿಗೆ 10 ಕೋಟಿ ರೂ.ವರೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ರಾಜ್ಯದ ಮುಖ್ಯಕಾರ್ಯದರ್ಶಿಗೆ ಸಲ್ಲಿಸಲು ತಿಳಿಸಿದರು.

9729 ಕೋಟಿ ಬಿಡುಗಡೆ: ಅಲ್ಪಸಂಖ್ಯಾತರ ಅಭಿವೃದ್ಧಿಗೆ 15 ಅಂಶಗಳ ಕಾರ್ಯಕ್ರಮಗಳಡಿ ಕೇಂದ್ರ ಸರ್ಕಾರ ಪ್ರಸಕ್ತ ವರ್ಷ 5029 ಕೋಟಿ ರೂ., ಕಳೆದ ವರ್ಷ 4700 ಕೋಟಿ ರೂ. ಸೇರಿ 9729 ಕೊಟಿ ರೂ. ನೀಡಿದೆ ಎಂದು ತಿಳಿಸಿದರು.

ಫಲಾನುಭವಿಗಳು ಆರ್ಥಿಕ ನೆರವು ಕೇಳಲು ಹೋದರೆ ಕೆಲ ಬ್ಯಾಂಕ್‌ಗಳು ಈ ಯೋಜನೆಯೇ ಇಲ್ಲ ಎಂದು ವಾಪಸ್ ಕಳುಹಿಸುತ್ತಿದ್ದಾರೆ. ಶೈಕ್ಷಣಿಕ ಸಾಲ ನೀಡಲು ಸತಾಯಿಸುತ್ತಿರುವ ದೂರುಗಳಿವೆ ಎಂದು ಅಸಮಧಾನ ವ್ಯಕ್ತಪಡಿದರು.

ಅಲ್ಪಸಂಖ್ಯಾತರ ಪ್ರದೇಶಕ್ಕೆ ಮೀಸಲಿರುವ ಅನುದಾನ ದುರ್ಬಳಕೆ ಆಗುತ್ತಿದೆ. ಕೆಲ ಶಾಲೆಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವ್ಯವಸ್ಥಾಪಕ 20 ದಿನಗಳಿಂದ ಕಚೇರಿಗೂ ಬಂದಿಲ್ಲ ಎಂದು ಕಾರ್ಯಕ್ರಮ ಅನುಷ್ಠಾನ ಪರಿಶೀಲನಾ ಸಮಿತಿ ಸದಸ್ಯ ಎಚ್.ಆರ್.ಮಹಮ್ಮದ್ ದೂರಿದರು.

ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಪ್ರತಿಕ್ರಿಯಿಸಿ ನಿರ್ಧಿಷ್ಟ ಪ್ರಕರಣ ತಿಳಿಸಲು ಸಲಹೆ ನೀಡಿದರು. ಜಿಪಂ ಸಿಇಒ ಸಿ. ಸತ್ಯಭಾಮಾ, ಎಸ್ಪಿ ಜಿ.ರಾಧಿಕಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ರೇಖಾ,ಡಿಡಿಪಿಐ ಕೆ.ರವಿಶಂಕರ ರೆಡ್ಡಿ,ಜಂಟಿ ಕೃಷಿ ನಿರ್ದೇಶಕ ಸದಾಶಿವಪ್ಪ,ಸಮಿತಿ ಸದಸ್ಯ ಮಹಮ್ಮದ್ ಷರೀಫ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net