ನೇಮಕಾತಿಯಲ್ಲಿ ಆದ್ಯತೆಗೆ ಆಗ್ರಹ

ctd 25 strike atiti
Published on

ಚಿತ್ರದುರ್ಗ: ಅಲ್ಪ ವೇತನಕ್ಕೆ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು, ಶಿಕ್ಷಕರಿಗೆ ನೇಮಕಾತಿಯಲ್ಲಿ ಆದ್ಯತೆ ಒದಗಿಸಬೇಕು, ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಎಐಡಿವೈಒ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಂಘಟನೆ ಕಾರ್ಯಕರ್ತರು ಹಾಗೂ ಅತಿಥಿ ಉಪನ್ಯಾಸಕರು, ಶಿಕ್ಷಕರು ಗುರುವಾರ ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪ್ರೌಢಶಾಲೆಗಳಲ್ಲಿ ಸಾವಿರಾರು ಉಪನ್ಯಾಸಕರು, ಶಿಕ್ಷಕರು ಕಡಿಮೆ ವೇತನಕ್ಕೆ ದುಡಿಯುತ್ತಿದ್ದು, ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಕೆಲವರು ಆತ್ಮಹತ್ಯೆಹಾದಿ ತುಳಿದಿದ್ದಾರೆ. ಕಾಯಿಲೆಗೆ ಒಳಗಾದವರು ಚಿಕಿತ್ಸೆಗೆ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಅತಿಥಿ ಉಪನ್ಯಾಸಕರಿಗೆ ಪ್ರತಿಬೋಧನಾ ಅವಧಿಗೆ 1500 ರೂ. ಅಥವಾ ಮಾಸಿಕ 50 ಸಾವಿರ ರೂ. ವೇತನ ನಿಗದಿಗೆ ಯುಜಿಸಿ ಆದೇಶಿಸಿದ್ದರೂ ಸರ್ಕಾರ ಕಡೆಗಣಿಸಿದೆ. ನೆಟ್, ಸೆಟ್ ಅಥವಾ ಪಿಎಚ್.ಡಿ ಆದವರಿಗೆ ಮಾಸಿಕ 13 ಸಾವಿರ ರೂ., ಉಳಿದವರಿಗೆ 11 ಸಾವಿರ ರೂ. ಹಾಗೂ ಶಿಕ್ಷಕರಿಗೆ 7500 ರೂ. ವೇತನ ಕೊಡಲಾಗುತ್ತಿದ್ದು, ಕಳೆದ 4-5 ತಿಂಗಳುಗಳಿಂದ ಈ ವೇತನವನ್ನೂ ಕೂಡ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಬದುಕು ದುರ್ಬರವಾಗುತ್ತಿದೆ. ಸಮಸ್ಯೆ ಅರಿತು ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಜತೆಗೆ ಅತಿಥಿ ಉಪನ್ಯಾಸಕರ, ಶಿಕ್ಷಕರ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ಕಲ್ಪಿಸಬೇಕು. ಕರೊನಾ ವಿಶೇಷ ಪ್ಯಾಕೇಜ್ ಸಹಿತ ನಾನಾ ಬೇಡಿಕೆಗಳ ಈಡೇರಿಕೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಳಿಕ ಎಡಿಸಿ ಸಿ.ಸಂಗಪ್ಪರಿಗೆ ಮನವಿ ಸಲ್ಲಿಸಿದರು.

ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗ್‌ನೈಸೇಷನ್ (ಎಐಡಿವೈಒ) ಜಿಲ್ಲಾಧ್ಯಕ್ಷ ಎಚ್.ರವಿಕುಮಾರ್, ಸದಸ್ಯರಾದ ಮಲ್ಲಿಕಾರ್ಜುನ್, ನಿಂಗರಾಜ್, ಅತಿಥಿ ಉಪನ್ಯಾಸಕರಾದ ಎಸ್.ಚಿತ್ತಯ್ಯ, ಕೃಷ್ಣಮೂರ್ತಿ, ಡಾ.ನಂದಿನಿ, ತಿಪ್ಪೆಸ್ವಾಮಿ, ಡಾ.ಸಂತೋಷ್ ಪವಾರ್, ಪದ್ಮಶ್ರೀ, ಡಾ.ಜಗದೀಶ್, ರಾಮಪ್ಪ, ಮಂಜು ಪಟೇಲ್, ಗಗನ್, ಲಕ್ಷ್ಮೀಕಾಂತ್, ಶ್ರೀನಿವಾಸ್, ಮಂಜುಳಾ, ಮಹಂತಪ್ಪ, ದಯಾನಂದ, ಅರವಿಂದ, ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net