ಪತ್ನಿಯ ಸಹಕಾರದಿಂದ ಜವಾಬ್ದಾರಿ ನಿಭಾಯಿಸಿದೆ; ಇನ್ಫೋಸಿಸ್​ ಸ್ಥಾಪಕ ನಾರಾಯಣಮೂರ್ತಿ ಹೇಳಿಕೆ

Narayan Murthy
Published on

ಬೆಂಗಳೂರು: ಇನ್ಫೋಸಿಸ್​ ಸಂಸ್ಥೆ ಇಂದು ಉನ್ನತ ಮಟ್ಟದಲ್ಲಿ ಬೆಳೆದು ನಿಂತಿರುವುದರ ಹಿಂದೆ ಸುಧಾ ಮೂರ್ತಿ ಅವರ ಕೊಡುಗೆ ಹಾಗೂ ಶ್ರಮ ಬಹಳಷ್ಟಿದೆ. ಪತ್ನಿಯ ಸಹಕಾರದಿಂದ ಸಂಸ್ಥೆ ಆರಂಭಿಸುವಾಗ ನನ್ನ ಮೇಲಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಯಿತು ಎಂದು ಇನ್ಫೋಸಿಸ್​ ಸಂಸ್ಥಾಪಕ ಎನ್​.ಆರ್​. ನಾರಾಯಣ ಮೂರ್ತಿ ಹೇಳಿದ್ದಾರೆ.

ಸಪ್ನ ಬುಕ್​ ಹೌಸ್​ ಹಾಗೂ ಜಗರ್​ನಾಟ್​ ಬುಕ್ಸ್​ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಸೇಂಟ್​ ಜಾನ್ಸ್​ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರ "ಆ್ಯನ್​ ಅನ್​ಕಾಮನ್​ ಲವ್​ : ದಿ ಅರ್ಲಿ ಲೈಫ್​ ಆಫ್​ ಸುಧಾ ಆ್ಯಂಡ್​ ನಾರಾಯಣಮೂರ್ತಿ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುಣೆಯಲ್ಲಿ ಕಳೆದ ನಮ್ಮ ಬದುಕು ಸುಂದರವಾಗಿತ್ತು. ಅಲ್ಲಿನ ಬೀದಿಗಳಲ್ಲಿ ಸುತ್ತಾಡುತ್ತಿದ್ದೆವು. ಜೊತೆಯಾಗಿ ಸಾಕಷ್ಟು ಹೋಟೆಲ್​ಗಳಿಗೆ ಹೋಗಿ, ಅಲ್ಲಿನ ವಿಶೇಷ ರುಚಿಗಳನ್ನು ಸವಿದಿದ್ದೇವೆ. ಇವೆಲ್ಲವೂ ಇಂದಿಗೂ ನೆನಪುಗಳಾಗಿ ಉಳಿದಿವೆ ಸ್ಮರಿಸಿದರು.

ಮದುವೆಯಾದ ಆರಂಭದಲ್ಲಿ ಕಷ್ಟದ ದಿನಗಳನ್ನೂ ಕಂಡಿದ್ದೇವೆ. ಉದ್ಯೋಗ ಇಲ್ಲದ ದಿನಗಳನ್ನು ಎದುರಿಸಿದ್ದೇನೆ. ಇನ್ಫೋಸಿಸ್​ನ ಆರಂಭದ ದಿನಗಳಲ್ಲಿ ಸುಧಾ, "ನಿಮ್ಮನ್ನು ನಾನು ಸಾಕುತ್ತೇನೆ' ಎಂದಿದ್ದರು. ನಾವಿಬ್ಬರೂ ಸಂಸ್ಕಾರಯುತ ಕುಟುಂಬದಿಂದ ಬಂದಿದ್ದರಿಂದ ಪುಸ್ತಕ ಓದುವ ಹವ್ಯಾಸ ರೂಢಿಯಾಗಿತ್ತು ಎಂದು ಹೇಳಿದರು.

ನಾನು ಇನ್ಫೋಸಿಸ್​ ಆರಂಭಿಸುವಾಗ ಆರು ಜನರಿದ್ದರು. ಸಾಕಷ್ಟು ಜವಾಬ್ದಾರಿ ನನ್ನ ಮೇಲಿತ್ತು. ಕಚೇರಿಗೆ ಬೇಕಾದ ವಸ್ತುಗಳನ್ನು ಖರೀದಿಸಿ ತರಲು ಕಷ್ಟವಾಗುತ್ತಿತ್ತು. ನಮ್ಮ ಕ್ಷೇತ್ರದಲ್ಲಿ ಸಂವಹನ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅಗತ್ಯದಷ್ಟು ಟೆಲಿೋನ್​ಗಳು ಇರಲಿಲ್ಲ. ಇಂತಹ ಸಮಸ್ಯೆಗಳನ್ನು ಸರಿದೂಗಿಸುವುದೇ ಸವಾಲಾಗಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ಜನರು ಸಹಾಯ ಮಾಡಿದ್ದಾರೆ ಎಂದು ಹೇಳಿದರು.

ನಾರಾಯಣಮೂರ್ತಿ ದಂಪತಿ ಪುತ್ರಿ ಅಕ್ಷತಾ, ಪುತ್ರ ರೋಹನ್​, ಲೇಖಕಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಮತ್ತಿತರರಿದ್ದರು.

ಜತೆಯಾಗಿ ಹೆಗಲು ಕೊಡುತ್ತ ಸಾಗಿದ್ದೇವೆ

ಇಂಜಿನಿಯರಿಂಗ್​ ಮಾಡುತ್ತಿದ್ದ ಸಂದರ್ಭದಲ್ಲಿ ನಾರಾಯಣಮೂರ್ತಿ ಅವರ ಪರಿಚಯವಾಯಿತು. ಅವರನ್ನು ನೋಡಿದಾಕ್ಷಣ "ಏನಿವು, ಕುಳ್ಳಗಿದ್ದಾರಲ್ಲ' ಎಂದು ಭಾಸವಾಗುತ್ತಿತ್ತು. ಮಾತನಾಡಲು ಆರಂಭಿಸಿದ ಬಳಿಕ ನಮ್ಮಿಬ್ಬರ ಅಭಿರುಚಿಗೆ ಸಾಮ್ಯತೆ ಇದೆ ಎಂಬುದು ಅರ್ಥವಾಯಿತು. ಓದುವುದು ನನ್ನ ಜೀವನದ ಒಂದು ಭಾಗ. ಇದನ್ನು ಅರಿತಿದ್ದ ನಾರಾಯಣಮೂರ್ತಿ, ಸಾಕಷ್ಟು ಪುಸ್ತಕಗಳನ್ನು ತಂದುಕೊಡುತ್ತಿದ್ದರು. ನಾವಿಬ್ಬರೂ ಒಬ್ಬರಿಗೊಬ್ಬರು ಹೆಗಲು ಕೊಡುತ್ತ ಜೊತೆಯಾಗಿಯೇ ಮುಂದೆ ಸಾಗಿದ್ದೇವೆ. ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ, ಆಕೆಯನ್ನು ಅರ್ಥ ಮಾಡಿಕೊಳ್ಳುವ ಪುರುಷ ಇರುತ್ತಾನೆ ಎಂದು ಇನ್ಫೋಸಿಸ್​ ಫೌಂಡೇಷನ್​ ಅಧ್ಯೆ ಸುಧಾಮೂರ್ತಿ ಹೇಳಿದರು.

ಪುತ್ರಿ ಮಾತಿನಿಂದ ಪ್ರೇರಣೆ

ಅದೊಂದು ದಿನ ಪುತ್ರಿ ಅಕ್ಷತಾ ಮಾತನಾಡುತ್ತ, ನನ್ನನ್ನು ಪ್ರಶ್ನಿಸುತ್ತಾ ಹೋದಳು. ನಿನಗೀಗ 45 ವರ್ಷ, ನಿನ್ನಲ್ಲಿ ಎಲ್ಲವೂ ಇದೆ. ಜೀವನದಲ್ಲಿ ಏನು ಮಾಡಬೇಕೆಂದುಕೊಂಡಿದ್ದೀಯಾ ಎಂದು ಕೇಳಿದಳು. ಇದು ನನ್ನನ್ನು ಬಹಳ ಕಾಡಿತು. ಆ ಕ್ಷಣದಿಂದ ನನ್ನ ನಿರ್ಧಾರ ಬದಲಾಯಿತು. ಇನ್ಫೋಸಿಸ್​ನಲ್ಲಿ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, "ಇನ್ಫೋಸಿಸ್​ ಫೌಂಡೇಷನ್​' ಆರಂಭಿಸಿದೆ. ಇದರಿಂದ ಜನರ ಸೇವೆ ಮಾಡಲು ಸಾಧ್ಯವಾಗಿದೆ ಎಂದು ಸುಧಾಮೂರ್ತಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net