

ಶ್ರೀರಂಗಪಟ್ಟಣ: ಉತ್ತರ ಮತ್ತು ದಕ್ಷಿಣ ಭಾರತದ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಮೂಲಕ 2 ರಾಜ್ಯದ ಚಿತ್ರ ಕಲಾವಿದರು ಬಲಿಷ್ಠ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆಯಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜೇಗೌಡ ಹೇಳಿದರು.
ಪಟ್ಟಣದ ಹೊರವಲಯದ ಹೋಟೆಲ್‌ನ ಕಾವೇರಿ ನದಿ ತೀರದಲ್ಲಿ ಕರ್ನಾಟಕ ಹಾಗೂ ಉತ್ತರಪ್ರದೇಶ ರಾಜ್ಯಗಳ ಲಲಿತ ಕಲಾ ಅಕಾಡೆಮಿಗಳು ಆಯೋಜಿಸಿರುವ ಕಾವೇರಿ-ಗಂಗಾ ಸಂಗಮ ಮೂರನೇ ದಿನದ ಚಿತ್ರಕಲಾ ಶಿಬಿರದಲ್ಲಿ ಮಾತನಾಡಿದರು.
ನಾಡಿನ ಹಿರಿಯ ಚಿತ್ರ ಕಲಾವಿದೆ ರೇಖಾ ಹೆಬ್ಬಾರ್ ಮಾತನಾಡಿ, ಚಿತ್ರಕಲೆಯೂ ಪ್ರತಿಭೆಯನ್ನು ಹೊರತರುವ ಜತೆಗೆ ಬಹು ಬೇಡಿಕೆಯ ಉದ್ಯೋಗಗಳಲ್ಲಿ ಒಂದಾಗಿದೆ. ವರ್ಣಮಯವಾಗಿ ಕರಗತ ಮಾಡಿಕೊಂಡರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಪ್ರಸ್ತುತ ಆನಿಮೇಷನ್, ಫ್ಯಾಷನ್ ಡಿಸೈನರ್, ಚಿತ್ರರಂಗ ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಗೊಂಡಂತೆ ಇತರೆಡೆ ಬಹುಬೇಡಿಕೆ ಸೃಷ್ಟಿಯಾಗಿದ್ದು, ಚಿತ್ರ ಕಲಾವಿದರು ಉದ್ಯೋಗ ಗಿಟ್ಟಿಸಿಕೊಳ್ಳಬಹುದು, ಆರ್ಥಿಕವಾಗಿಯೂ ಸದೃಢರಾಗಬಹುದು ಎಂದು ಸಲಹೆ ನೀಡಿದರು.
ರಾಜ್ಯ ಲಲಿತಾ ಕಲಾ ಅಕಾಡೆಮಿ ಮಂಡ್ಯ ವಿಭಾಗದ ಮುಖ್ಯಸ್ಥ ವಿನೋದ್‌ಕುಮಾರ್, ಉತ್ತರ ಪ್ರದೇಶದ ಹಿರಿಯ ಚಿತ್ರ ಕಲಾವಿದರಾದ ನಿರ್ಮಲಾ ಕುಮಾರ್, ಡಾ.ಪೂರ್ಣಿಮಾ ತಿವಾರಿ, ರಾಮ್ ಸುದನ್, ರಾಜ್ಯದ ಎನ್.ನರಸಿಂಹಮೂರ್ತಿ, ಲಕ್ಷ್ಮಣಕಬ್ಬಡಿ, ಕಲಾತಪಸ್ವಿ ಅನಿಲಕುಮಾರ್, ಮೈಸೂರಿನ ರವಿವರ್ಮ ಚಿತ್ರಕಲಾ ಕಾಲೇಜು ಪ್ರಾಂಶುಪಾಲ ಶಿವಕುಮಾರ ಕೆಸರೆಮಡು ಹಾಜರಿದ್ದರು. ಬಳಿಕ ಮೈಸೂರಿನ ರವಿವರ್ಮ ಚಿತ್ರಕಲಾ ಕಾಲೇಜು ಕಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.