

ಹುಮನಾಬಾದ್: ಚಿಟಗುಪ್ಪ ಹಾಗೂ ಹುಮನಾಬಾದ್ ತಾಲೂಕಿನಲ್ಲಿ ನಡೆದಿದ್ದ ದೇವಸ್ಥಾನ ಹುಂಡಿ ಹಾಗೂ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳನ್ನು ಬುಧವಾರ ಭೇದಿಸಿದ ಪೊಲೀಸರು, ಐವರನ್ನು ಬಂಧಿಸಿ ೧೦ ಬೈಕ್, ಒಂದು ಅಪ್ಪೆ ಆಟೋ ಹಾಗೂ ಬಂಗಾರ, ಬೆಳ್ಳಿ, ನಗದು ಸೇರಿ ೫,೪೪,೯೭೦ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹೇಶ ಮೇಘಣ್ಣನವರ್, ಚಂದ್ರಕಾಂತ ಪೂಜಾರಿ, ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡ ಮಾರ್ಗದರ್ಶನದಲ್ಲಿ ಸಿಪಿಐಗಳಾದ ಗುರುಲಿಂಗಪ್ಪಗೌಡ ಪಾಟೀಲ್, ಶ್ರೀನಿವಾಸ ಅಲ್ಲಾಪುರೆ ನೇತೃತ್ವದ ತಂದ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಹುಮನಾಬಾದ್ ಠಾಣೆ ಗುಡ್ ಮಾರ್ನಿಂಗ್ ಬೀಟ್ ಸಿಬ್ಬಂದಿ ಹಳೆಯ ತಹಸಿಲ್ ಎದುರು ಮಂಗಳವಾರ ಬೆಳಗ್ಗೆ ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದವನನ್ನು ಹಿಡಿದು ವಿಚಾರಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ೨.೬೦ ಲಕ್ಷದ ೭ ಬೈಕ್ ಜಪ್ತಿ ಮಾಡಿದ್ದು, ಇದರಲ್ಲಿ ೪ ಬೈಕ್ ತೆಲಂಗಾಣದ ಜಹೀರಾಬಾದ್ ಠಾಣೆ, ೨ ಚರಕಪಳ್ಳಿ, ಒಂದು ಮೋಟಾರ್ ಸಂಗಾರೆಡ್ಡಿ ಠಾಣೆ ವ್ಯಾಪ್ತಿಗೆ ಒಳಪ್ಪಟ್ಟಿರುತ್ತವೆ. ಸಿಬ್ಬಂದಿ ಬಸವರೆಡ್ಡಿ, ಮಲ್ಲು ಮಳ್ಳಿ, ಶಿವಶರಣ, ಸೂರ್ಯಕಾಂತ, ನಾಗೇಶ ಕಾರ್ಯಾಚರಣೆ ತಂಡದಲ್ಲಿದ್ದರು.
ಚಿಟಗುಪ್ಪ ತಾಲೂಕಿನ ಬೇಮಳಖೇಡ ಠಾಣೆ ವ್ಯಾಪ್ತಿಯ ದೇವಗಿರಿ ತಾಂಡಾದಲ್ಲಿ ಕಳೆದ ೨ರಂದು ದುರ್ಗಮ್ಮ ದೇವಿ ಗುಡಿ ಗೇಟ್ ಕೀಲಿ ಮುರಿದು ಗಲ್ಲಾ ಪೆಟ್ಟಿಗೆ ಒಡೆದು ಅಂದಾಜು ೮೫,೦೦೦ ರೂ. ನಗದು ದೋಚಲಾಗಿತ್ತು. ಈ ಸಂಬಂಧ ಒಬ್ಬನನ್ನು ಬಂಧಿಸಿ ಮೂರು ಮೋಟಾರ್ ಸೈಕಲ್, ಅಪ್ಪೆ ಆಟೋ, ನಗದು ೭೯,೯೭೦ ರೂ., ೧೧ ಗ್ರಾಂ ಬೆಳ್ಳಿ ಮತ್ತು ಒಂದು ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಸಿಪಿಐ ಶ್ರೀನಿವಾಸ ಅಲ್ಲಾಪುರ ನೇತೃತ್ವದ ತಂಡದಲ್ಲಿ ಪಿಎಸ್‌ಐ ನಿಂಗಪ್ಪ ಮಣ್ಣೂರ, ಸಿಬ್ಬಂದಿ ಅಂಬರೀಶ, ಲಕ್ಷ್ಮೀಕಾಂತ, ರೂಬೇನ, ಮಾಣಿಕ, ಜೀಪ ಚಾಲಕ ಸಿದ್ಧಾರೂಢ ಇದ್ದರು.