ನಾಯಿಯೊಂದಿಗೆ ಶೌಚಗೃಹದಲ್ಲಿ ಬಂಧಿಯಾಗಿದ್ದ ಚಿರತೆ ಎಸ್ಕೇಪ್

chita escape
Published on

ಸುಬ್ರಹ್ಮಣ್ಯ: ಬಿಳಿನೆಲೆ ಕೈಕಂಬ ಮೂಲೆಮನೆ ಎಂಬಲ್ಲಿ ಫೆ.2ರ ರಾತ್ರಿ ವೇಳೆ ನಾಯಿಯನ್ನು ಅಟ್ಟಿಸಿಕೊಂಡು ಬಂದು ಶೌಚಗೃಹದಲ್ಲಿ ಬಂಧಿಯಾಗಿದ್ದ ಚಿರತೆ ಅಲ್ಲಿಂದ ಎಸ್ಕೇಪ್ ಆಗಿದೆ.

ನಾಯಿಯನ್ನು ಅಟ್ಟಿಸಿಕೊಂಡು ಚಿರತೆ ನಾಯಿ ಸಹಿತ ಶೌಚಗೃಹದ ಒಳ ಸೇರಿತ್ತು. ಮನೆಯೊಡತಿ ಜಯಲಕ್ಷ್ಮೀ ಅವರು ಮನೆಯಲ್ಲಿ ಒಬ್ಬರೇ ಇರುವುದರಿಂದ ಪಕ್ಕದ ಮನೆಯಲ್ಲಿ ತಂಗುತ್ತಿದ್ದರು. ರಾತ್ರಿ ನಾಯಿ ಜೋರಾಗಿ ಬೊಗಳುವುದನ್ನು ಗಮನಿಸಿದ ಮನೆಯೊಡತಿಗೆ ರಾತ್ರಿ ಏನೂ ಕಂಡಿಲ್ಲ.

ಬುಧವಾರ ಬೆಳಗ್ಗೆ ಆರು ಗಂಟೆಯ ಸುಮಾರಿಗೆ ಮನೆಗೆ ಬಂದಾಗ ನಾಯಿ ಅರ್ಧ ಬಾಗಿಲು ಹಾಕಿದ ಶೌಚಗೃಹದ ಒಳಗಡೆ ಬದಿಯಲ್ಲಿ ಮಲಗಿತ್ತು. ಚಿರತೆ ಇರುವುದನ್ನು ಗಮನಿಸಿಲ್ಲ. ಅವರು ಶೌಚಗೃಹದ ಚಿಲಕ ತೆರಳಿದ್ದಾರೆ. ಬಳಿಕ ನೆರೆಮನೆಯವರು ಬಂದಾಗ ಚಿರತೆ ಇರುವುದು ಗಮನಕ್ಕೆ ಬಂದಿದೆ.

ಬೆಳಗ್ಗೆ ಅರಣ್ಯ ಇಲಾಖೆ ಹಾಗೂ ಪೋಲಿಸರು ಚಿರತೆ ಹಿಡಿಯಲು ತಯಾರಿ ನಡೆಸಿ, ಗನ್‌ಮೂಲಕ ಅರಿವಳಿಕಾ ಔಷಧಿಯನ್ನು ನೀಡಲು ಮುಂದಾಗುತ್ತಿದ್ದಂತೆ ಚಿರತೆ ಶೌಚಗೃಹದ ಗೋಡೆ ಹಾರಿ ಕಾಡಿಗೆ ಓಡಿದೆ. ಎಲ್ಲರೂ ನೋಡ ನೋಡುತ್ತಿದ್ದಂತೆ ಚಿರತೆ ಓಡಿದ್ದು, ಅರಣ್ಯ ಇಲಾಖೆಯ ವೈಫಲ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿಯಿಂದ ಬೆಳಗ್ಗಿನವರೆಗೆ ಶೌಚಗೃಹದ ಒಳಗೆ ಚಿರತೆಯೊಂದಿಗೆ ಜೀವಕೈಯಲ್ಲಿ ಹಿಡಿದು ಕುಳಿತಿದ್ದ ನಾಯಿ ಬದುಕಿದೆ ಬಡಜೀವ ಎಂದು ಎದ್ದು ಹೊರಬಂದಿದೆ.

,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net