ಅತ್ತಿವೇರಿಯಲ್ಲಿ ಹಕ್ಕಿಗಳ ಚಿಲಿಪಿಲಿ

attiveri
Published on

ಚಂದ್ರಶೇಖರಯ್ಯ ಹಿರೇಮಠ ಮುಂಡಗೋಡ

ತಾಲೂಕಿನ ಅತ್ತಿವೇರಿ ಪಕ್ಷಿಧಾಮಕ್ಕೆ ವಿವಿಧ ಭಾಗಗಳಿಂದ ಹಲವಾರು ಬಗೆಯ ಪಕ್ಷಿಗಳು ಆಗಮಿಸಿ ಬೀಡು ಬಿಟ್ಟಿರುವುದು ಪಕ್ಷಿ ಪ್ರೀಯರಿಗೆ ಸಂತಸವನ್ನುಂಟು ಮಾಡಿದೆ.

ಸೂರ್ಯ ಉದಯಿಸುವ ಮುನ್ನವೆ ಹಕ್ಕಿಗಳ ಚಿಲಿಪಿಲಿ ಸದ್ದು ಎತ್ತ ನೋಡಿದರತ್ತ ಪಕ್ಷಿಗಳು. ಪಕ್ಷಿಗಳ ಹಾರಾಟ, ಕೂಗಾಟ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವ ಸ್ವದೇಶಿ ಪಕ್ಷಿಗಳ ಕಲರವ ನೋಡಲು ಎರಡು ಕಣ್ಣುಗಳು ಸಾಲದು.

ತಾಲೂಕಿನ ಹುನಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿವೇರಿ ಗ್ರಾಮದ ಸನಿಹದಲ್ಲಿ ಪಕ್ಷಿಧಾಮವಿದ್ದು ಹಲವಾರು ದಶಕಗಳಿಂದಲೂ ಅಕ್ಟೋಬರ್, ನವೆಂಬರ್‌ನಲ್ಲಿ ದೇಶ-ವಿದೇಶಗಳ ನೂರಾರು ಬಗೆಯ ಪಕ್ಷಿಗಳು ವಲಸೆ ಬಂದು ವಂಶಾಭಿವೃದ್ಧಿ ಮಾಡುತ್ತವೆ. ಮಾರ್ಚ್, ಏಪ್ರಿಲ್ ವೇಳೆಗೆ ಮರಳುವುದು ಸಾಮಾನ್ಯ ಅದರಂತೆ ಈ ಬಾರಿಯೂ ಪಕ್ಷಿಗಳು ಅತ್ತಿವೇರಿಗೆ ಆಗಮಿಸಿ ಪಕ್ಷಿಪ್ರಿಯರ ಮನತಣಿಸುತ್ತಿವೆ.

ಯಾವ ಪಕ್ಷಿಗಳ ಆಗಮನ: ಅತ್ತಿವೇರಿ ಪಕ್ಷಿಧಾಮಕ್ಕೆ ಸದ್ಯ ಸ್ವದೇಶ ಪಕ್ಷಿಗಳು ಮಾತ್ರ ಆಗಮಿಸಿದ್ದು ವಿದೇಶ ಪಕ್ಷಿಗಳು ಇನ್ನೂ ಬಂದಿಲ್ಲ. ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಿರುವ ಕಾರಣ ವಿದೇಶಿ ಪಕ್ಷಿಗಳು ಆಗಮಿಸಿಲ್ಲ ಎನ್ನಲಾಗುತ್ತಿದೆ.

ಸದ್ಯ ಸ್ವದೇಶಿಯ ಕರಿಕೊಕ್ಕರೆ, ಸೂಜಿ ಬಾಲದ ಬಾತುಕೋಳಿ, ಸಲಿಕೆ ಚುಂಚಿನ ಬಾತುಕೋಳಿ, ನೀಲಿ ರೆಕ್ಕೆಯ ಬಾತುಕೋಳಿ, ಸಾಮಾನ್ಯ ಬಾತುಕೋಳಿ, ಜಾಗು ಸೆಳವ, ಮತ್ಸ್ಯ ಭಕ್ಷಕ ಗಿಡುಗ, ಚಕೋರ, ಉಂಗುರದ ಕೆಸರುಗೊರವ, ಕೆಂಟಿಷ್‌ಗೊರವ, ಸಾಮಾನ್ಯ ಗ್ರೀನ್‌ಶಾಂಕ್, ವರಟೆ ದೇವನಕ್ಕಿ, ಚಮಚ ಕೊಕ್ಕರೆ, ಸಣ್ಣಸ್ಟಿಂಟ್, ಬೂದುಖಂಜನ, ಬಿಳಿಖಂಜನ, ಹಳದಿಖಂಜನ, ಚಾತಕಪಕ್ಷಿ, ಗುಲಾಬಿ ಮೈನಾ, ಹಸಿರುಮರಳು ಪೀಪಿ... ಹೀಗೆ ಇಪ್ಪತ್ತಕ್ಕೂ ಹೆಚ್ಚು ಬಗೆಯ ಪಕ್ಷಿಗಳು ಬೀಡು ಬಿಟ್ಟಿವೆ. ಇವುಗಳಲ್ಲಿ ಕೆಲವು ಪಕ್ಷಿಗಳು ಗೂಡು ಕಟ್ಟಿಕೊಂಡು ಮೊಟ್ಟೆಗಳನ್ನು ಹಾಕಿವೆ.

ಅಕ್ಟೋಬರ್‌ನಿಂದ ಅತ್ತಿವೇರಿ ಪಕ್ಷಿಧಾಮಕ್ಕೆ ಆಗಮಿಸುವ ಪಕ್ಷಿಗಳು ಮಾರ್ಚ್‌ವರೆಗೂ ಇಲ್ಲಿಯೇ ಬೀಡು ಬಿಡುತ್ತವೆ. ಪಕ್ಷಿಧಾಮದ ಬಳಿಯಿರುವ ಜಲಾಶಯದ ನಡುಗಡ್ಡೆಗಳಲ್ಲಿ ಹಾಗೂ ಸುತ್ತಲಿನ ದಟ್ಟಅರಣ್ಯದಲ್ಲಿನ ಮರಗಳಲ್ಲಿ ಗೂಡು ಕಟ್ಟಿಕೊಂಡು ವಂಶಾಭಿವೃದ್ಧಿಗೊಳಿಸಿಕೊಂಡು ನಂತರ ಮರಿಗಳೊಂದಿಗೆ ಮಾರ್ಚ್‌ಗೆ ವಿದೇಶಕ್ಕೆ ಮರಳುತ್ತವೆ. ಚಳಿಗಾಲ ಸಮಯದಲ್ಲಿ ಈ ಹಕ್ಕಿಗಳು ಇಲ್ಲಿಗೆ ಆಗಮಿಸಿ ವಂಶಾಭಿವೃದ್ಧಿಗೊಳಿಸುವುದು ಸಾಮಾನ್ಯವಾಗಿದೆ.

ಈ ವರ್ಷ ಅತ್ತಿವೇರಿ ಪಕ್ಷಿಧಾಮಕ್ಕೆ ಸ್ವದೇಶಿಯ ವಿವಿಧ ಬಗೆಯ ಪಕ್ಷಿಗಳು ಬಂದು ಬೀಡು ಬಿಟ್ಟಿವೆ. ವಿದೇಶ ಪಕ್ಷಿಗಳು ಸಹ ಆಗಮಿಸುವ ಸಾದ್ಯತೆಗಳಿವೆ. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ವಾಗೀಶ ಬಿ.ಜೆ, ಆರ್‌ಎಫ್‌ಒ ಮುಂಡಗೋಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net