

ಕೊಕಟನೂರ: ಬಂಗಾರದ ಆಸೆಯಿಂದ ವ್ಯಕ್ತಿಯೊಬ್ಬನನ್ನು ಕೊಲೆಗೈದು ಶವವನ್ನು ನೀರಿಗೆ ಎಸೆದ ಆರೋಪದ ಮೇಲೆ ಅಥಣಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಅಥಣಿ ತಾಲೂಕಿನ ಜಂಬಗಿ ಗ್ರಾಮದ, ಹಾಲಿ ಮಹಾರಾಷ್ಟ್ರದ ಮಿರಜ್ ತಾಲೂಕಿನ ಅರಗ ಗ್ರಾಮದ ನವನಾಥ ಬಾಪುಸಾಹೇಬ ಬಾಬರ (30) ಬಂಧಿತ.
ಉತ್ತರ ಪ್ರದೇಶದ ಜಾಂದೌಲಿ ಜಿಲ್ಲೆಯ ಮುಗಲ್ ಸರಾಯಿ ಗ್ರಾಮದಲ್ಲಿ ಬಂಗಾರದ ಆಭರಣದ ಅಂಗಡಿ ಇಟ್ಟು ವ್ಯಾಪಾರ ನಡೆಸುತ್ತಿದ್ದ ಮಿರಜ್ ತಾಲೂಕಿನ ಪಾಟಗಾಂವದ ಸಾಗರ ಪಾಟೀಲ (30) ಕೊಲೆಯಾದ ದುರ್ದೈವಿ. ಈತನ ಶವವು ಅಥಣಿ ತಾಲೂಕಿನ ಅವರಖೋಡ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಅ.4ರಂದು ಪತ್ತೆಯಾಗಿತ್ತು.
ಆಗ ಸಾಗರನ ಬಳಿ ಇದ್ದ ಆಧಾರ ಕಾರ್ಡ್ ಮಾಹಿತಿ ಮೇರೆಗೆ ಅಥಣಿ ಪೊಲಿಸರು ಪಾಟಗಾಂವಕ್ಕೆ ತೆರಳಿ ಆತನ ಪತ್ನಿಯನ್ನು ವಿಚಾರಿಸಿದ್ದಾರೆ. ಸಾಗರನ ಪತ್ನಿ ನೀಡಿದ ದೂರಿನ ಮೆರೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದರು. ಸೋಮವಾರ ಸಂಜೆ ಮಿರಜ್ ತಾಲೂಕಿನ ಗಗನೋಳಿಯಲ್ಲಿ ನವನಾಥನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಬಂಗಾರದ ಆಸೆಗೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅ.4ರಂದು ಮೃತ ಸಾಗರನ ಜೇಬಿನಲ್ಲಿದ್ದ 75 ಲಕ್ಷ ರೂ.ಮೌಲ್ಯದ 1 ಕೆಜಿ 491 ಗ್ರಾಂ ಚಿನ್ನ, ಆರೋಪಿ ನವನಾಥ ಬಾಬರ ಕಡೆಯಿಂದ 2 ಲಕ್ಷ ರೂ. ಮೌಲ್ಯದ 3 ಕೆಜಿ 638 ಗ್ರಾಂ ಬೆಳ್ಳಿ ಸೇರಿ ಒಟ್ಟು 77 ಲಕ್ಷ ರೂ. ಮೌಲ್ಯದ ಬಂಗಾರ-ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿಯಾದ ಲಕ್ಷ್ಮಣ ಅಜ್ಣಣಗಿ, ಮಲ್ಲಯ್ಯ ಹಿರೇಮಠ, ಎಂ.ಬಿ. ದೊಡಮನಿ, ಎ.ಎ.ಈರಕರ, ಪಿ.ಬಿ.ನಾಯಿಕ, ಬಸವರಾಜ ತಳವಾರ ಪಾಲ್ಗೊಂಡಿದ್ದರು.