ಚಿರತೆ ಆಪರೇಷನ್‌ಗೆ ಆನೆಗಳು!

Published on

ತುಮಕೂರು: ನರಭಕ್ಷಕ ಚಿರತೆ ಸೆರೆಹಿಡಿಯುವ ಕಾರ್ಯಾಚರಣೆಗೆ ನಾಗರಹೊಳೆಯಿಂದ 2 ಆನೆಗಳನ್ನು ಕರೆತರಲಾಗಿದೆ. ಆನೆಗಳನ್ನು ಬಳಸಿಕೊಂಡು ಚಿರತೆ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮೊದಲ ಬಾರಿ ಮುಂದಾಗಿದೆ.

ಮನುಷ್ಯನನ್ನು ಹತ್ಯೆಗೈದಿರುವ ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲೂಕುಗಳು ಹೊಂದಿಕೊಂಡಿರುವ ಟ್ರೈ ಜಂಕ್ಷನ್ ಪ್ರದೇಶದಲ್ಲಿನ ಬನ್ನಿಕುಪ್ಪೆ, ಮಣಿಕುಪ್ಪೆ, ದೊಡ್ಡಮಳಲವಾಡಿ, ಚಿಕ್ಕಮಳಲವಾಡಿ ಭಾಗದಲ್ಲಿ ಶುಕ್ರವಾರ ಚಿರತೆ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆರಂಭಿಸಲಿದ್ದಾರೆ.

ನಾಗರಹೊಳೆ ಆನೆಗಳು: ನರಭಕ್ಷಕ ಚಿರತೆಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಸರ್ಕಾರದ ಆದೇಶ ವಿಳಂಬವಾದ ಹಿನ್ನೆಲೆಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಪಳಗಿದ 2 ಆನೆಗಳನ್ನು ಕಾರ್ಯಾಚರಣೆಗೆ ಗುರುವಾರ ಕರೆತರಲಾಗಿದೆ. ಕೃಷ್ಣ, ಗಣೇಶ ಆನೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ. ಮಾವುತರ ಸೇರಿ 9 ಜನರ ತಂಡ ಚಿರತೆ ಆಪರೇಷನ್‌ನಲ್ಲಿ ಸಾಥ್ ನೀಡಲಿದೆ.

ಡಾ.ಮುರಳಿ ಸಾರಥ್ಯ: ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಸಾರಥ್ಯವನ್ನು ಅರವಳಿಕೆ ತಜ್ಞ ಡಾ.ಮುರಳಿ ವಹಿಸಲಿದ್ದಾರೆ. ಅರವಳಿಕೆ ಮದ್ದು ನೀಡಬಲ್ಲ ಗುರಿಕಾರರಾದ ವೆಂಕಟೇಶ್ ಹಾಗೂ ಅಕ್ರಂ ಚಿರತೆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ ಎಂದು ಡಿಎಫ್‌ಒ ಎಚ್.ಸಿ.ಗಿರೀಶ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.

ಚಿರತೆ ಸೆರೆಗೆ ಹರಸಾಹಸ:3 ತಾಲೂಕುಗಳು ಕೂಡುವ ಭಾಗದ 8-10 ಕಿ.ಮೀ., ಪ್ರದೇಶ ವ್ಯಾಪ್ತಿಯಲ್ಲಿ 4 ಚಿರತೆಗಳಿದ್ದು 2 ನರಭಕ್ಷಕ ಚಿರತೆಗಳಿರಬಹುದು ಎಂದು ಅರಣ್ಯ ಇಲಾಖೆ ಗುರುತಿಸಿದೆ. ಟ್ರಾೃಪ್ ಕ್ಯಾಮರಾಗಳಲ್ಲಿನ ಚಿರತೆ ಚಲನವಲನಗಳನ್ನು ಗಮನಿಸಿ ಚಿರತೆ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು. ಆನೆಗಳನ್ನು ಬಳಸಿ ಚಿರತೆ ಸೆರೆ ಕಾರ್ಯಾಚರಣೆಗೆ ಮುಂದಾಗಿರುವುದು ಇದು ಮೊದಲ ಬಾರಿ ಎನ್ನಲಾಗಿದೆ. ಪೊದೆಗಳ ಬಳಿವರೆಗೆ ಹೋಗಲು ಆನೆಗಳನ್ನು ಬಳಸಲಾಗುವುದು. ಮಾವುತರು ಸೇರಿ 9 ಜನರ ತಂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ.

ಚಿರತೆ ಸೆರೆ ಕಾರ್ಯಾಚರಣೆಗೆ ಮೊದಲ ಬಾರಿ ಆನೆಗಳನ್ನು ಬಳಸಲಾಗುತ್ತಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಬಂದಿರುವ ಪಳಗಿರುವ ಆನೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದು ಎಷ್ಟರಮಟ್ಟಿಗೆ ಯಶಸ್ಸು ಸಿಗುತ್ತೊ ನೋಡಬೇಕಿದೆ.

ಎಚ್.ಸಿ.ಗಿರೀಶ್ ಡಿಎಫ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net