

ಬಂಟ್ವಾಳ: ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆಯ ಹವ್ಯಾಸ ಬೆಳೆಸುವ ಜತೆಗೆ ಪಕ್ಷಿಗಳ ಕುರಿತು ಕುತೂಹಲ ಮೂಡಿಸುವ ನಿಟ್ಟಿನಲ್ಲಿ ಬಿ.ಸಿ.ರೋಡ್ನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯಲ್ಲಿ, ಚೀಂವ್ ಚೀಂವ್ ಅಭಿಯಾನದ ಮೂಲಕ ಪಕ್ಷಿಗಳಿಗೆ ನೀರು ಕುಡಿಯಲು ಶಾಲೆಯ 117 ವಿದ್ಯಾರ್ಥಿಗಳು ತೆಂಗಿನ ಗೆರಟೆ ಉಪಯೋಗಿಸಿ 252 ನೀರುಣಿಸುವ ಪಾತ್ರೆ ಮಾಡಿ ಮರಗಿಡಗಳಲ್ಲಿ ಅಳವಡಿಸಿದ್ದಾರೆ.
ಶಾಲೆಯ ಹಸಿರು ಭವಿಷ್ಯ ಪರಿಸರ ಸಂಘದ ಮಾರ್ಗದರ್ಶಿ ಶಿಕ್ಷಕ ರೋಶನ್ ಪಿಂಟೋ ಮಾರ್ಗದರ್ಶನದಲ್ಲಿ 5ನೇ ವರ್ಷ ಈ ಕಾರ್ಯ ನಡೆಯುತ್ತಿದ್ದು, ಪರಿಸರ ಸ್ನೇಹಿ ನೀರುಣಿಸುವ ಹಾಗೂ ಆಹಾರ ಇಡುವ ಪಾತ್ರೆಗಳನ್ನು ತಯಾರಿಸಿ ಶಾಲಾ ಪರಿಸರ, ವಿದ್ಯಾರ್ಥಿಗಳ ಮನೆಗಳ ಸುತ್ತ ಹಾಗೂ ನೆರೆಹೊರೆಯ ಮನೆಗಳ ಸುತ್ತ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆ, ಅದರ ಕುರಿತು ಕುತೂಹಲ ಮೂಡಿಸಲು ಘಟಕಗಳಲ್ಲಿ ಪಕ್ಷಿಗಳು ನೀರು, ಆಹಾರವನ್ನು ತಿನ್ನುವಾಗ ಫೋಟೋಗಳನ್ನು ತೆಗೆಯುವ ಸ್ಪರ್ಧೆಯನ್ನೂ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಗುತ್ತಿದೆ. ಶಾಲಾ ಶಿಕ್ಷಕ-ವಿದ್ಯಾರ್ಥಿಗಳ ಈ ಪ್ರಯತ್ನ ಬಲುದೊಡ್ಡ ಪರಿಣಾಮವನ್ನು ಬೀರಿದ್ದು, ಶಾಲಾ ಪರಿಸರದ ಮರಗಳಲ್ಲಿ ಅಳವಡಿಸಿರುವ ನೀರಿನ ಘಟಕದಲ್ಲಿ ಹೆಚ್ಚಿನ ಪಕ್ಷಿಗಳು ಬಂದು ನೀರು ಕುಡಿಯುವ ದೃಶ್ಯ ಕಂಡುಬಂದಿದೆ.
ಹಸಿರು ಭವಿಷ್ಯ ಪರಿಸರ ಸಂಘ ಆಯೋಜಿಸಿದ್ದ ಈ ಬಾರಿಯ ಚೀಂವ್ ಚೀಂವ್ ಅಭಿಯಾನಕ್ಕೆ ಮುಖ್ಯಶಿಕ್ಷಕಿ ನವೀನ ಎ.ಸಿ. ಚಾಲನೆ ನೀಡಿದರು. ವಿದ್ಯಾರ್ಥಿಗಳು ಶಿಕ್ಷಕ ರೋಶನ್ ಪಿಂಟೋ ನೇತೃತ್ವದಲ್ಲಿ ನೀರುಣಿಸುವ ಘಟಕಗಳನ್ನು ಸ್ಥಾಪಿಸಿದರು. ಪಕ್ಷಿಗಳು ನೀರು-ಆಹಾರ ಸೇವಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳಾದ ಕೀರ್ತನ್ ಸ್ವಾಗತಿಸಿದರು. ಆಶಫನ್ ವಂದಿಸಿದರು. ಶಾನ್ವಿ ಕಾರ್ಯಕ್ರಮ ನಿರ್ವಹಿಸಿದರು.