ಅವಕಾಶ ಸೃಷ್ಟಿಸಿಕೊಳ್ಳುವುದು ಬುದ್ಧಿವಂತಿಕೆ: ಎಡಿಸಿ ಡಾ.ಎಚ್.ಎಲ್.ನಾಗರಾಜು ಸಲಹೆ

23_11_Mdy_02(Chinthana Manthana)
Published on

ಮಂಡ್ಯ: ಅವಕಾಶಗಳಿಗೆ ಕಾಯುವುದಕ್ಕಿಂತ ನಾವೇ ಸೃಷ್ಟಿ ಮಾಡೋಣ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನ(ಸ್ವಾಯತ್ತ)ನಲ್ಲಿ ಪ್ರತಿಮಾ ಟ್ರಸ್ಟ್ ಚನ್ನರಾಯಪಟ್ಟಣ, ಚಿಂತನ ಮಂಥನ ಕ್ರಿಯಾಶೀಲ ರಾಜ್ಯ ವೇದಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಪದವಿ ಘಟಕದ ಸಹಯೋಗದಲ್ಲಿ ‘ಆಸ್ತಿ ಮತ್ತು ಉದ್ಯೋಗ ಭದ್ರತೆ-ಮಹಿಳೆಯರಿಗೊಂದು ಆಶಾಕಿರಣ’ ವಿಷಯ ಕುರಿತು ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅವಕಾಶ ಹುಡುಕಿ ಬಂದರೆ ಅದು ಅದೃಷ್ಟ. ಆದರೆ ಅವಕಾಶವನ್ನು ನಾವೇ ಸೃಷ್ಟಿಸಿಕೊಳ್ಳುವುದು ಬುದ್ಧಿವಂತಿಕೆ. ಆದ್ದರಿಂದ ನಾವೆಲ್ಲರೂ ಅದೃಷ್ಟವಂತರಾಗಲು ಸಾಧ್ಯವಾಗದಿದ್ದರೂ ಬುದ್ಧಿವಂತರಾಗಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು. ಹೆಣ್ಣು ಮಕ್ಕಳು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ವಿದ್ಯಾವಂತರಾಗಿ ಸಾರ್ವಜನಿಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಂತಹ ಕಾರ್ಯಕ್ಷಮತೆ ಗಳಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಬಯಸುವುದಾದರೆ ನಾನೇ ತರಬೇತಿ ನೀಡುವುದಾಗಿ ಹೇಳಿದರು.

ಮೈಸೂರಿನ ರಂಗ ನಿರ್ದೇಶಕ ಅರಸೀಕೆರೆ ಯೋಗಾನಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚನ್ನರಾಯಪಟ್ಟಣ ಪ್ರತಿಮಾ ಟ್ರಸ್ಟ್ ಅಧ್ಯಕ್ಷ ಉಮೇಶ್ ತೆಂಕನಹಳ್ಳಿ, ಪ್ರಾಂಶುಪಾಲ ಡಾ.ಆರ್.ದಶರಥ, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಎನ್.ವಾಸುದೇವನ್, ಎನ್‌ಎಸ್‌ಎಸ್ ಅಧಿಕಾರಿ ಡಾ.ಎಂ.ಕೆಂಪಮ್ಮ ಇತರರಿದ್ದರು.

ಇದೇ ವೇಳೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net