

ಹೊಳೆನರಸೀಪುರ: ಅಗಾಧ ಜ್ಞಾನ ಸಂಪಾದನೆಯಿಂದ ವ್ಯಕ್ತಿಯು ಸಮಾಜದ ಎಲ್ಲ ಹಂತದಲ್ಲಿ ಸಮಾನತೆ ಹೊಂದಲು ಸಾಧ್ಯವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದಲ್ಲಿ ಎಸ್‌ಸಿ, ಎಸ್ಟಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಉತ್ತಮ ಜ್ಞಾನ ಸಂಪಾದನೆ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯವಾಗುತ್ತದೆ. ಜ್ಞಾನ ಭಂಡಾರವೇ ಆತನಿಗೆ ಬಲಿಷ್ಠ ಆಯುಧಗಳಿದ್ದಂತೆ. ಹೆಚ್ಚು ಜ್ಞಾನ ಹಾಗೂ ಆಯುಧಗಳು ವ್ಯಕ್ತಿಯ ಬಳಿ ಇದ್ದರೆ ಆತನಿಗೆ ಭಯವೇ ಇರುವುದಿಲ್ಲ. ಎಲ್ಲ ಹಂತದಲ್ಲೂ ಯಾವುದೇ ಸಂದರ್ಭದಲ್ಲೂ ಧೈರ್ಯದಿಂದ ನಿಲ್ಲಲು ಸಾಧ್ಯವಾಗುತ್ತದೆ ಎಂದರು.
ಸಂವಿಧಾನಾತ್ಮಕವಾಗಿ ಹಕ್ಕುಗಳನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಜನಗಳ ಶ್ರೇಯೋಭಿವೃದ್ಧಿಗಾಗಿ ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಂವಿಧಾನವನ್ನು ರಚಿಸಿ ದೇಶಕ್ಕೆ ನೀಡಿದ್ದಾರೆ. ಸಾಂವಿಧಾನಿಕ ಹುದ್ದೆಗಳನ್ನು ಸಮಾನವಾಗಿ ಗಳಿಸಬೇಕಾದರೆ ವಿದ್ಯಾವಂತರಾದರೆ ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದರ ಜತೆಗೆ ಪಾಲಕರು ಉತ್ತಮ ಸಂಸ್ಕಾರ ಬೆಳೆಸಬೇಕು. ಇದರಿಂದ ಸಮಾಜದಲ್ಲಿ ಒಳ್ಳೆಯ ಗೌರವ ಸಂಪಾದಿಸಬಹುದು. ಇಂತಹ ಸನ್ಮಾರ್ಗದಲ್ಲಿ ಎಲ್ಲರೂ ನಡೆಯುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ವೆಂಕಟೇಶ್, ಚನ್ನರಾಯಪಟ್ಟಣದ ಅಲ್ಪಸಂಖ್ಯಾತರ ಮುರಾರ್ಜಿ ಶಾಲೆಯ ಉಪನ್ಯಾಸಕ ಎಂ.ಜೆ.ರತ್ನಾಕರ ಮಾತನಾಡಿದರು. ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಶಿಕ್ಷಕ ಎನ್.ಎಸ್.ಯತೀಶ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಸ್.ಉಮೇಶ್, ಕೇಶವ್, ರಾಮಚಂದ್ರಪ್ಪ, ಶಿಕ್ಷಕ ನರಸಿಂಹಮೂರ್ತಿ, ಯೋಗಮೂರ್ತಿ, ರಂಗಮ್ಮ, ಚೆನ್ನಕೇಶವ , ಡಿ.ಎಲ್.ನಂದ, ಕಾಂತರಾಜು, ನಾಗರಾಜ, ಅನಂತಕುಮಾರ್, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಮಮತಾ ಇದ್ದರು.